ಇನ್ಫೋಸಿಸ್ ಪುತ್ರನಿಗೆ ಟಿವಿಎಸ್ ಪುತ್ರಿ; ಸದ್ಯದಲ್ಲೇ ಮದುವೆ
ಬೆಂಗಳೂರು, ಭಾನುವಾರ, 8 ಆಗಸ್ಟ್ 2010( 16:31 IST )
ದೇಶದ ಐಟಿ ದೈತ್ಯ ಸಂಸ್ಥೆ ಇನ್ಪೋಸಿಸ್ ಟೆಕ್ನಾಲಾಜೀಸ್ ಲಿಮಿಟೆಡ್ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ-ಸೂಧಾ ಮೂರ್ತಿ ದಂಪತಿಯ ಪುತ್ರ ಎನ್. ಆರ್. ರೋಹಾನ್ ಮೂರ್ತಿ ಅವರು ಸದ್ಯದಲ್ಲೇ ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಟಿವಿಎಸ್ ಮೋಟಾರ್ ಮುಖ್ಯಸ್ಥ ವೇಣು ಶ್ರೀನಿವಾಸನ್-ಮಲ್ಲಿಕಾ ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮೀ ಜತೆ ವಿವಾಹಿತರಾಗಲಿದ್ದಾರೆ.
ಹೌದು, ರೋಹಾನ್ ಗುರುವಾರ ಚೆನ್ನೈನ ಲಕ್ಷ್ಮೀ ನಿವಾಸಕ್ಕೆ ತೆರಳಿ ವಿವಾಹ ಪ್ರಸ್ತಾವವನ್ನು ಇರಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಅವರಿಬ್ಬರೂ ಒಬ್ಬರಿಗೊಬ್ಬರು ಪರಿಚಿತರು ಎಂದು ಮೂರ್ತಿ ಹೇಳಿದರು. ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಇದು ವಧು-ವರರಿಗೆ ಬಿಟ್ಟ ವಿಚಾರ ಎಂದವರು ತಿಳಿಸಿದರು.
ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್‌ದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ 27 ಹರೆಯದ ರೋಹನ್, ಮೈಕ್ರೋಸಾಫ್ಟ್ ಸಂಶೋಧನಾ ಶಿಷ್ಯವೇತನವನ್ನು ಪಡೆದಿದ್ದಾರೆ. ಅಲ್ಲದೆ ಇನ್ಫೋಸಿಸ್ ಕಂಪೆನಿಯಲ್ಲಿ ಶೇ 2ರಷ್ಟು ಪಾಲು ಹೊಂದಿದ್ದಾರೆ.
ಬ್ರಿಟನ್‌ನ ವಾರ್‌ವಿಕ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ 27ರ ಹರೆಯದ ಲಕ್ಷ್ಮಿ, ಟಿವಿಎಸ್ ಗ್ರೂಪ್ ಕಂಪೆನಿಯ ಆಡಳಿತ ಮಂಡಳಿಯ ಸದಸ್ಯೆಯೂ ಆಗಿದ್ದಾರೆ.