ಅಂತಾರಾಷ್ಟ್ರೀಯ ವಿಕಿರಣ ನಿಯಮಾವಳಿ ಪ್ರಮಾಣಪತ್ರ ಪಡೆಯದೆ ನಿಯಮಾವಳಿ ಉಲ್ಲಂಘಿಸಿದ ಗೋಪುರಕ್ಕೆ 5 ಲಕ್ಷದಂತೆ ಮೊಬೈಲ್ ಸೇವಾ ಸಂಸ್ಥೆಗಳಿಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಅಂತಾರಾಷ್ಟ್ರೀಯ ಆಯೋಗ ನಿಗದಿಪಡಿಸಿದ ಮಿತಿಯಲ್ಲಿಯೇ ಮೊಬೈಲ್ ಗೋಪುರಗಳ ವಿಕಿರಣ ಪ್ರಭಾವ ಇರಬೇಕು. ಈ ಮಿತಿ ಉಲ್ಲಂಘಿಸಿದರೆ ಪ್ರತಿಯೊಂದು ಗೋಪುರಗಳ ಮೇಲೂ ದಂಡ ವಿಧಿಸಲಾಗುತ್ತದೆ ಎಂದು ದೂರಸಂಪರ್ಕ ಖಾತೆಯ ರಾಜ್ಯ ಸಚಿವ ಸಚಿನ್ ಪೈಲಟ್ ತಿಳಿಸಿದ್ದಾರೆ. ಇದು ನವೆಂಬರ್ ತಿಂಗಳಿಂದ ಜಾರಿಗೆ ಬರಲಿದೆ.
ಮೊಬೈಲ್ ಗೋಪುರಗಳು ಹೊರಸೂಸುವ ವಿಕಿರಣ ಅಲೆಗಳಿಂದ ಜನರ ಆರೋಗ್ಯದ ಮೇಲಾಗುವ ವ್ಯತಿರಿಕ್ತ ಪರಿಣಾಮ ತಡೆಗಟ್ಟಲು ಸರ್ಕಾರ ಈ ಕಠಿಣ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಈಗಾಗಲೇ ದೂರಸಂಪರ್ಕ ಇಲಾಖೆ ಎಲ್ಲ ಮೊಬೈಲ್ ಸೇವಾ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದೆ.