ಮುಂಬೈ: ಟಾಟಾ ಸಂಸ್ಥೆಯ ಉತ್ತರಾಧಿಕಾರಿಯ ಆಯ್ಕೆಗೆ ಸಮಿತಿ ರಚಿಸಿದ ಒಂದು ವಾರದ ನಂತರ ಇದೇ ಮೊದಲ ಬಾರಿಗೆ ಟಾಟಾ ಸಂಸ್ಥೆ ತನ್ನ ಉತ್ತರಾಧಿಕಾರಿಯ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದೆ. ಟಾಟಾದ ಉತ್ತರಾಧಿಕಾರಿ ಪಾರ್ಸಿ ಪರವಾದ ಅಥವಾ ಪಾರ್ಸಿ ವಿರೋಧವಾದ ಮನೋಭಾವ ಹೊಂದಿದವನಾಗಿರಬಾರದು ಎಂದು ಸ್ವತಃ ಟಾಟಾದ ಹಾಲಿ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.
ಟಾಟಾ ಸಂಸ್ಥೆ ಉತ್ತರಾಧಿಕಾರಿಯಾಗಿ ಪಾರ್ಸಿ, ಭಾರತೀಯ ಅಥವಾ ವಿದೇಶೀಯ ಈ ಮೂವರ ಪೈಕಿ ಯಾರಿಗೆ ಮಣೆ ಹಾಕಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರತನ್ ಟಾಟಾ, ಟಾಟಾ ಸಂಸ್ಥೆ ಒಂದು ಭಾರತೀಯ ಸಂಸ್ಥೆ. ನಾವು ಒಂದು ಪಾರ್ಸಿ ಸಂಸ್ಥೆ ಎಂದು ಗುರುತಿಸಲ್ಪಟ್ಟಿಲ್ಲ ಎಂದು ನೇರವಾಗಿ ಉತ್ತರಿಸಿದರು.
ಜೆಮ್‌ಶೆಡ್‌ಜೀ ಟಾಟಾ ಆರಂಭಿಸಿದ ಟಾಟಾ ಸಂಸ್ಥೆ ಇಂದು ಬೃಹತ್ತಾಗಿ ಬೆಳೆದಿದ್ದು ಸದ್ಯ 70 ಮಿಲಿಯನ್ ಡಾಲರ್ ಆದಾಯ ಹೊಂದಿದೆ. ಇದರಲ್ಲಿ ಶೇ.70ರಷ್ಟು ವಿದೇಶದಿಂದಲೇ ಹರಿದುಬರುತ್ತದೆ ಎಂದು ರತನ್ ಟಾಟಾ ತಿಳಿಸಿದರು.
ಸಮಿತಿ ಯಾವುದೇ ಪೂರ್ವಗ್ರಹಗಳಿಗೆ ಕಟ್ಟುಬಿದ್ದಿಲ್ಲ. ಸಮಿತಿ ಎಲ್ಲ ವಿಚಾರಗಳನ್ನು ಪರಾಮರ್ಶಿಸಿ ಪ್ರತಿಭಾವಂತನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಇದಕ್ಕೆ ಜಾತಿ, ಮತ, ದೇಶಗಳೆಂಬ ಬೇಧವಿಲ್ಲ ಎಂದು ತಿಳಿಸಿದರು.