ಬ್ಲ್ಯಾಕ್‌ಬೆರ್ರಿ ಸೇವೆ: ಸರಕಾರದಿಂದ ಇಂದು ನಿರ್ಧಾರ ಸಾಧ್ಯತೆ
ನವದೆಹಲಿ, ಗುರುವಾರ, 12 ಆಗಸ್ಟ್ 2010( 12:39 IST )
ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಬ್ಲ್ಯಾಕ್‌ಬೆರ್ರಿ ಸೇವೆಗೆ ನಿಷೇಧ ಹೇರಿವೆ. ಒಂದು ವೇಳೆ ಭದ್ರತಾ ಕಳವಳಕ್ಕೆ ಕಾರಣವಾಗುವ ಅಂಶಗಳಿದ್ದಲ್ಲಿ, ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಅತ್ಯಾಧುನಿಕ ಹ್ಯಾಂಡ್‌ಸೆಟ್ ಬ್ಲ್ಯಾಕ್‌ಬೆರ್ರಿ ತಯಾರಕ ಸಂಸ್ಥೆ ರಿಸರ್ಚ್ ಇನ್ ಮೋಶನ್, ಬಳಕೆದಾರರ ಕೋಡ್ ಸಂಖ್ಯೆಗಳನ್ನು ನೀಡಲು ಸಿದ್ಧ ಎಂದು ಹೇಳಿಕೆ ನೀಡಿದ್ದರಿಂದ, ಸೌದಿ ಅರೇಬಿಯಾ ಸೇರಿದಂತೆ ಇತರ ರಾಷ್ಟ್ರಗಳ ಸರಕಾರಗಳು ಸೇವೆ ಸ್ಥಗಿತ ನಿರ್ಧಾರವನ್ನು ಪುನರ್‌ಪರಿಶೀಲಿಸುವುದಾಗಿ ಹೇಳಿಕೆ ನೀಡಿವೆ.
ವಿಶ್ವದ ದಿಗ್ಗಜ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಗಣ್ಯಾತಿಗಣ್ಯ ರಾಜಕಾರಣಿಗಳ ಅಚ್ಚುಮೆಚ್ಚಿನ ಹ್ಯಾಂಡ್‌ಸೆಟ್ ಬ್ಲ್ಯಾಕ್ ಬೆರ್ರಿ, ಇ-ಮೇಲ್ ಮತ್ತು ಗೂಢಲಿಪಿಕರಣ ಸಂದೇಶ ಸೇವೆಗಳ ಕುರಿತಂತೆ ಅಪಸ್ವರಕ್ಕೆ ಒಳಗಾಗಿದೆ.
ಭಾರತ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಉತ್ತರ ಆಫ್ರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳು ಬ್ಲ್ಯಾಕ್‌ಬೆರ್ರಿ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಿವೆ. ಆದರೆ, ಗೂಢ ಲಿಪಿಕರಣವನ್ನು ಉಗ್ರರು ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಭಾರತ ಸರಕಾರ ಕಳವಳ ವ್ಯಕ್ತಪಡಿಸಿವೆ.
2008ರಲ್ಲಿ ನಡೆದ ಮುಂಬೈ ಉಗ್ರರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ ಘಟನೆಯಲ್ಲಿ ಪಾಕಿಸ್ತಾನ ಮೂಲದ ಉಗ್ರರು ಮೊಬೈಲ್ ಮತ್ತು ಸೆಟಿಲೈಟ್ ದೂರವಾಣಿಗಳನ್ನು ಬಳಸಿಕೊಂಡಿರುವುದು ತನಿಖೆಯಿಂದ ತಿಳಿದು ಬಂದಿತ್ತು.
ಆಂತರಿಕ ಭದ್ರತಾ ವ್ಯವಸ್ಥೆ ವಿಭಾಗದ ಮುಖ್ಯಸ್ಥ ಯು.ಕೆ ಬನ್ಸಾಲ್ ಮಾತನಾಡಿ,ದೇಶದ ಟೆಲಿಕಾಂ ಆಪರೇಟರ್ ಕಂಪೆನಿಗಳೊಂದಿಗೆ ಸಭೆಯನ್ನು ಆಯೋಜಿಸಲಾಗಿದ್ದು, ರಿಸರ್ಚ್ ಇನ್ ಮೋಶನ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಾರೆ ಅಥವಾ ಇಲ್ಲವೇ ಎನ್ನುವ ಬಗ್ಗೆ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.