ಕಳೆದೆರಡು ವಾರಗಳಿಂದ ಏಕಂಕಿಗೆ ಕುಸಿದಿದ್ದ ಆಹಾರ ಹಣದುಬ್ಬರ ದರ, ಜುಲೈ 31ಕ್ಕೆ ವಾರಂತ್ಯಗೊಂಡಂತೆ ದ್ವಿದಳ ಧಾನ್ಯ, ಹಾಲು ಮತ್ತು ಹಣ್ಣು ದರಗಳಲ್ಲಿ ಏರಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ದರ ಶೇ.11.40ಕ್ಕೆ ಏರಿಕೆಯಾಗಿ, ಜನಸಾಮಾನ್ಯರಲ್ಲಿ ಮತ್ತೆ ಕಳವಳ ಮೂಡಿದಂತಾಗಿದೆ.
ಜುಲೈ 24ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.9.53ಕ್ಕೆ ಕುಸಿದು ಜನಸಾಮಾನ್ಯರ ನಿರಾಳತೆಗೆ ಒಳಗಾಗುವ ಮುನ್ನವೆ ಕೇವಲ 15 ದಿನಗಳ ಅವಧಿಯಲ್ಲಿ ಮತ್ತೆ ಆಹಾರ ಹಣದುಬ್ಬರ ದರ ಎರಡಂಕಿಗೆ ತಲುಪಿದೆ.
ವಾರ್ಷಿಕ ಆಧಾರದನ್ವಯ, ಭತ್ತ, ಗೋಧಿ ದರಗಳಲ್ಲಿ ಏರಿಕೆಯಾಗಿದ್ದರಿಂದ, ದ್ವಿದಳ ಧಾನ್ಯ ದರ ಶೇ.6.97ಕ್ಕೆ ಏರಿಕೆ ಕಂಡಿತ್ತು.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.20.74ರಷ್ಟು ಇಳಿಕೆಯಾಗಿದ್ದು, ಗೋಧಿ ಮತ್ತು ಭತ್ತದ ದರಗಳಲ್ಲಿ ಕ್ರಮವಾಗಿ ಶೇ.6.89 ಮತ್ತು ಶೇ.7.93ರಷ್ಟು ಏರಿಕೆಯಾಗಿದೆ.
ಕಳೆದ ವರ್ಷದ ಅವಧಿಗೆ ಹೋಲಿಸಿದಲ್ಲಿ ಇತರ ಆಹಾರ ವಸ್ತುಗಳಾದ, ಹಾಲು ದರದಲ್ಲಿ ಶೇ.19.03ರಷ್ಟು ಏರಿಕೆ ಕಂಡಿದೆ. ಹಣ್ಣು ದರಗಳಲ್ಲಿ ಕೂಡಾ ಶೇ.7.42ರಷ್ಟು ದುಬಾರಿಯಾಗಿದೆ.
ಕೆಲ ತಿಂಗಳುಗಳಿಂದ ಕುಸಿತವಾಗಿದ್ದ ಈರುಳ್ಳಿ ದರ, ಪ್ರಸಕ್ತ ವಾರದ ಅವಧಿಯಲ್ಲಿ ಶೇ.0.32ರಷ್ಟು ಏರಿಕೆ ಕಂಡಿದೆ. ಆಲೂಗಡ್ಡೆ ದರದಲ್ಲಿ ಕೂಡಾ ಶೇ.42.18ರಷ್ಟು ಏರಿಕೆಯಾಗಿದ್ದು, ತರಕಾರಿ ದರಗಳಲ್ಲಿ ಶೇ.6.09ರಷ್ಟು ಇಳಿಕೆಯಾಗಿದೆ.
2009ರ ಡಿಸೆಂಬರ್ ಅವಧಿಯಲ್ಲಿ ಶೇ.20ಕ್ಕೆ ತಲುಪಿದ್ದ ಆಹಾರ ಹಣದುಬ್ಬರ ದರ, ಜುಲೈ ತಿಂಗಳ ಮೂರನೇ ವಾರದ ಅವಧಿಯಲ್ಲಿ ಒಂದಂಕಿಗೆ ಕುಸಿತ ಕಂಡಿತ್ತು.