ಮೂಲಸೌಕರ್ಯ ಕ್ಷೇತ್ರದ ಮೆಟಾಸ್ ಇನ್‌ಫ್ರಾ ಕಂಪೆನಿ, ಜೂನ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ 43.46 ಕೋಟಿ ರೂಪಾಯಿಗಳ ನಿವ್ವಳ ನಷ್ಟ ಅನುಭವಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸತ್ಯಂ ಹಗರಣದ ಪ್ರಮುಖ ಆರೋಪಿ ಬಿ.ರಾಮಲಿಂಗಾ ರಾಜು ಸಂಚಾಲಿತ ಮೆಟಾಸ್ ಕಂಪೆನಿ, ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 16.28ಕೋಟಿ ರೂಪಾಯಿ ನಿವ್ವಳ ನಷ್ಟ ಅನುಭವಿಸಿತ್ತು ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಪ್ರಸಕ್ತ ವರ್ಷದ ಅವಧಿಯಲ್ಲಿ ಜಂಟಿಸಹಭಾಗಿತ್ವ ಹೊಂದಿರುವುದರಿಂದ ಕಳೆದ ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶಗಳು ಹೋಲಿಕೆ ಮಾಡುವಂತಿಲ್ಲ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿ 173.18 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 207.97 ಕೋಟಿ ರೂಪಾಯಿಗಳ ಆದಾಯಗಳಿಸಿತ್ತು.
ಕಳೆದ ತಿಂಗಳು, ಸೌದಿ ಅರೇಬಿಯಾ ಮೂಲದ ಸೌದಿ ಬಿನ್ ಲಾಡೆನ್ ಗ್ರೂಪ್,ಮೆಟಾಸ್ ಕಂಪೆನಿಗೆ 301.92 ಕೋಟಿ ರೂಪಾಯಿಗಳನ್ನು ಪಾವತಿಸಿ ಶೇ.20ರಷ್ಟು ಶೇರುಗಳನ್ನು ಖರೀದಿಸಿ, ಸಹಸಂಚಾಲಕತ್ವವನ್ನು ಹೊಂದಿದೆ.
ಮುಂಬೈ ಶೇರುಪೇಟೆಗಳಲ್ಲಿ ಮೆಟಾಸ್ ಶೇರುಗಳು ಪ್ರತಿ ಶೇರಿಗೆ 222 ರೂಪಾಯಿಗಳಾಗಿದ್ದು,ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಹೋಲಿಸಿದಲ್ಲಿ ಶೇ.1.77ರಷ್ಟು ಕುಸಿತ ಕಂಡಿವೆ.