ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಆಭರಣ ವ್ಯಾಪಾರಿಗಳು ಹಾಗೂ ಚಿನ್ನದ ಸಂಗ್ರಹಕಾರರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ ಸತತ ಆರು ದಿನಗಳ ವಹಿವಾಟಿನಲ್ಲಿ ಚಿನ್ನದ ದರ ನಿರಂತರ ಏರಿಕೆ ಕಾಣುತ್ತಿದ್ದು, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 30 ರೂಪಾಯಿ ಏರಿಕೆಯಾಗುವುದರೊಂದಿಗೆ, ಪ್ರತಿ 10ಗ್ರಾಂ ಚಿನ್ನದ ದರ 18,900 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ಆರ್ಥಿಕ ತೊಳಲಾಟದಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ. ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಕೂಡಾ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,227.65 ಡಾಲರ್‌ಗಳಿಗೆ ಏರಿಕೆಯಾಗಿದ್ದು, ಜುಲೈ 1ರ ನಂತರ ಪ್ರಥಮ ಬಾರಿ ಗರಿಷ್ಟ ಏರಿಕೆ ಕಂಡಿದೆ.
ಹಬ್ಬದ ಸೀಜನ್ ಹಿನ್ನೆಲೆಯಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿಯಲ್ಲಿ ಭಾರಿ ಏರಿಕೆಯಾಗಿದ್ದು,ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆಗೆ ಕಾರಣವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ನಾಣ್ಯಗಳ ತಯಾರಕರಿಂದ ಹಾಗೂ ಕೈಗಾರಿಕೋದ್ಯಮ ಕ್ಷೇತ್ರಗಳಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 285 ರೂಪಾಯಿಗಳ ಏರಿಕೆಯಾಗಿ 29,750 ರೂಪಾಯಿಗಳಿಗೆ ಏರಿಕೆಯಾಗಿದೆ.
ಬೆಳ್ಳಿಯ (100 ನಾಣ್ಯಗಳು)ದರದಲ್ಲಿ ಕೂಡಾ 200 ರೂಪಾಯಿಗಳ ಏರಿಕೆಯಾಗಿ 34,700 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.