ಅಮೆರಿಕ ಎಚ್-1ಬಿ ಮತ್ತು ಎಲ್-1 ವೀಸಾ ಶುಲ್ಕ ಹೆಚ್ಚಳಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ವೀಸಾ ಶುಲ್ಕ ಹೆಚ್ಚಳದಿಂದ ಭಾರತೀಯ ಕಂಪೆನಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಅದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಭಾರತದೊಂದಿಗೆ ದೀರ್ಘಾವಧಿಯ ಆರ್ಥಿಕ ಪಾಲುದಾರಿಕೆಯನ್ನು ಹೊಂದಿರುವುದರಿಂದ, ಮುಂಬರುವ ದಿನಗಳಲ್ಲಿ ಮತ್ತಷ್ಟು ವೃದ್ಧಿಯಾಗಲಿದೆ ಎಂದು ವಾಷಿಂಗ್ಟನ್ ವಿಶ್ವಾಸ ವ್ಯಕ್ತಪಡಿಸಿದೆ.
ಭಾರತ ಸರಕಾರದ ಕಳವಳ ನಮಗೆ ಅರ್ಥವಾಗುತ್ತದೆ. ವೀಸಾ ಶುಲ್ಕ ಹೆಚ್ಚಳದಿಂದಾಗಿ ಅಮೆರಿಕದಲ್ಲಿ ಹೂಡಿಕೆ ಮಾಡುವ ಭಾರತೀಯ ಕಂಪೆನಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಉಪವಕ್ತಾರ ಮಾರ್ಕ್ ಟೋನರ್ ತಿಳಿಸಿದ್ದಾರೆ.
ಮುಂಬರುವ ಎರಡು ವರ್ಷಗಳಲ್ಲಿ ವೀಸಾ ಶುಲ್ಕವನ್ನು 2000 ಡಾಲರ್‌ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.ಇದರಿಂದಾಗಿ ಒಟ್ಟು 550 ಮಿಲಿಯನ್ ಡಾಲರ್ ಆರ್ಥಿಕ ಸಂಗ್ರಹವಾಗಲಿದ್ದು, ಯುಎಸ್-ಮೆಕ್ಸಿಕೊ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲು ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.