ತರಕಾರಿ ದರಗಳಲ್ಲಿ ಇಳಿಕೆಯಾಗಿದ್ದು, ವಿಶೇಷವಾಗಿ ಆಲೂಗಡ್ಡೆ ಮತ್ತು ಈರುಳ್ಳಿ ದರಗಳಲ್ಲಿ ಇಳಿಕೆಯಾಗಿದ್ದರಿಂದ, ವಾರ್ಷಿಕ ಆಹಾರ ಹಣದುಬ್ಬರ ದರ ಅಗಸ್ಟ್ 7ಕ್ಕೆ ವಾರಂತ್ಯಗೊಂಡಂತೆ ಶೇ.10.37ಕ್ಕೆ ಇಳಿಕೆಯಾಗಿದೆ.
ಆಹಾರ ಹಣದುಬ್ಬರ ದರ ಜುಲೈ31ಕ್ಕೆ ವಾರಂತ್ಯಗೊಂಡಂತೆ, ಶೇ.11.40ಕ್ಕೆ ಏರಿಕೆಯಾಗಿ ಸತತ ಎರಡನೇ ವಾರದ ಅವಧಿಗೆ ಎರಡಂಕಿಗೆ ತಲುಪಿತ್ತು. ಜುಲೈ ಮಧ್ಯ ಭಾಗದಲ್ಲಿ ಆಹಾರ ಹಣದುಬ್ಬರ ದರ ಒಂದಂಕಿಗೆ ತಲುಪಿತ್ತು.
ವಾರ್ಷಿಕ ಆಧಾರದ ಹಿನ್ನೆಲೆಯಲ್ಲಿ, ಆಲೂಗಡ್ಡೆ ದರದಲ್ಲಿ ಬಹುತೇಕ ಶೇ.50ರಷ್ಟು ಇಳಿಕೆಯಾಗಿದೆ.ಏತನ್ಮಧ್ಯೆ, ತರಕಾರಿ ದರಗಳಲ್ಲಿ ಶೇ.22.12 ಹಾಗೂ ಈರುಳ್ಳಿ ದರದಲ್ಲಿ ಶೇ.6.91ರಷ್ಟು ಇಳಿಕೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ದ್ವಿದಳ ಧಾನ್ಯ, ಭತ್ತ ಮತ್ತು ಗೋಧಿ ದರಗಳಲ್ಲಿ ಏರಿಕೆಯಾಗಿದ್ದರಿಂದ, ಧಾನ್ಯಗಳ ದರಗಳಲ್ಲಿ ಶೇ.7.40ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.
ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.18.32ರಷ್ಟು ಏರಿಕೆಯಾಗಿದ್ದು,ಭತ್ತ ಮತ್ತು ಗೋಧಿ ದರಗಳಲ್ಲಿ ಕ್ರಮವಾಗಿ ಶೇ.8.27 ಮತ್ತು ಶೇ.7.63ರಷ್ಟು ಏರಿಕೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇತರ ಆಹಾರ ವಸ್ತುಗಳಾದ, ಹಾಲು ದರದಲ್ಲಿ ಶೇ.19.03ರಷ್ಟು ಏರಿಕೆಯಾಗಿದ್ದು, ಹಣ್ಣು ದರಗಳಲ್ಲಿ ಶೇ.16.74ರಷ್ಟು ಹೆಚ್ಚಳವಾಗಿದೆ.
ಒಟ್ಟಾರೆ ಹಣದುಬ್ಬರ ದರ, ಸುಮಾರು ಐದು ತಿಂಗಳುಗಳ ನಂತರ ಶೇ.9.97ಕ್ಕೆ ಇಳಿಕೆಯಾಗಿ ಒಂದಂಕಿಗೆ ತಲುಪಿತ್ತು.