ಮೊಟ್ಟೆಗಳು ರೋಗಗ್ರಸ್ಥವಾಗಿ ವಿಷಯುಕ್ತವಾದ ಹಿನ್ನೆಲೆಯಲ್ಲಿ, ಐವೊ ಮೊಟ್ಟೆ ಉತ್ಪಾದಕ ಸಂಸ್ಥೆ 22.8 ಕೋಟಿ ಮೊಟ್ಟೆಗಳನ್ನು ವಾಪಸ್ ಕರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಕೊಲೊರಾಡೊ, ಕ್ಯಾಲಿಫೋರ್ನಿಯಾ ಮತ್ತು ಮಿನ್ನೆಸೊಟಾ ನಗರಗಳಲ್ಲಿ, ಜೂನ್ ಮತ್ತು ಜುಲೈ ತಿಂಗಳ ಅವಧಿಯಲ್ಲಿ ರೋಗಕ್ಕೆ ಸಂಬಂಧಿಸಿದ 200 ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಐವೊದ ಗಾಲ್ಟ್‌ನಲ್ಲಿರುವ ರೈಟ್ ಕೌಂಟಿ ಉತ್ಪಾದಕ ಸಂಸ್ಥೆಯಿಂದ ಉತ್ಪಾದಿಸಲಾಗುವ ಮೊಟ್ಟೆಗಳಲ್ಲಿ ರೋಗದ ಅಂಶಗಳು ಕಂಡುಬಂದಿವೆ ಎಂದು ಆರೋಗ್ಯ ನಿಯಂತ್ರಣ ಮತ್ತು ಸಂರಕ್ಷಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯುಕ್ತ ರೋಗಗ್ರಸ್ಥ ಮೊಟ್ಟೆಗಳಿಂದಾಗಿ ಕ್ಯಾಲಿಫೋರ್ನಿಯಾದಲ್ಲಿ 266 ಮಂದಿ ಅನಾರೋಗ್ಯ ಪೀಡಿತರಾಗಿದ್ದು,ಮಿನ್ನಿಸೊಟಾ ನಗರದಲ್ಲಿ ಏಳು ಮಂದಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಐವೊ ಘಟಕದಿಂದ ಉತ್ಪಾದಿಸಲಾದ ಮೊಟ್ಟೆಗಳನ್ನು ಲೂಸೆರ್ನೆ, ಅಲ್ಬರ್ಟಸನ್, ಮೌಂಟೇನ್ ಡೈರಿ, ರಾಲ್ಫ್ಸ್ ಬೂಮ್‌ಸ್ಮಾಸ್, ಸನ್‌ಶೈನ್ ಟ್ರಾಫಿಕಂಡಾ, ಫಾರ್ಮ್‌ಫ್ರೆಶ್ , ಶೊರ್‌ಲುಂಡ್, ಡಚ್ ಫಾರ್ಮ್ಸ್ ಮತ್ತು ಕೆಂಪ್ ಹೆಸರಿನಲ್ಲಿ ಪ್ಯಾಕ್ ಮಾಡಿ ದೇಶಾದ್ಯಂತ ವಿತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಕುರಿತಂತೆ, ಆಹಾರ ಮತ್ತು ಔಷಧಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.