ತಿರುವನಂತಪುರಂ, ಮಂಗಳವಾರ, 24 ಆಗಸ್ಟ್ 2010( 20:01 IST )
ಕೇರಳದ ಪ್ರಮುಖ ಹಬ್ಬವಾದ ಓಣಂ ಸಂದರ್ಭದ ವಾರದ ಅವಧಿಯಲ್ಲಿ 155 ಕೋಟಿ ರೂಪಾಯಿಗಳ ಮದ್ಯದ ಮಾರಾಟ ನಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.15ರಷ್ಟು ಹೆಚ್ಚಳವಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.
ಚಿಲ್ಲರೆ ಮದ್ಯದ ಅಂಗಡಿಗಳ ವಹಿವಾಟು ನಡೆಸುತ್ತಿರುವ ಕೇರಳ ಬೆವೆರಗೆಸ್ ಕಾರ್ಪೋರೇಶನ್ (ಬೆವೆಕೊ), ಓಣಂ ಅವಧಿಯಲ್ಲಿ ವಿವಿಧ ಭ್ರ್ಯಾಂಡ್‌ಗಳ ಮದ್ಯದ ಮಾರಾಟ 155 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಕಳೆದ ವರ್ಷದ ಅವಧಿಯಲ್ಲಿ 134 ಕೋಟಿ ರೂಪಾಯಿಗಳ ವಹಿವಾಟು ದಾಖಲಾಗಿತ್ತು ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
'ತಿರುವೊಣಂ' ಹಬ್ಬದ ಎರಡು ದಿನಗಳ ಅವಧಿಯಲ್ಲಿಯೇ 65 ಕೋಟಿ ರೂಪಾಯಿ, ಮದ್ಯ ಮಾರಾಟ ಮಾಡಲಾಗಿದೆ ಎಂದು ಬೆವೆಕೊ ಕಾರ್ಪೋರೇಶನ್ ಮೂಲಗಳು ತಿಳಿಸಿವೆ.
ಕೇರಳದಲ್ಲಿ ಮದ್ಯ ಸೇವನೆ ಹಾಗೂ ಲಾಟರಿ ಹುಚ್ಚು ಸಮಾಜಕ್ಕೆ ಕಳವಳಕಾರಿ ಅಂಶಗಳಾಗಿ ಪರಿಣಮಿಸಿವೆ ಎಂದು ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
1990ರಲ್ಲಿ ಮುಖ್ಯಮಂತ್ರಿಯಾಗಿದ್ದ ಎ.ಕೆ.ಆಂಟನಿ ಸರಾಯಿ ನಿಷೇಧ ಹೇರಿದ ಹಿನ್ನೆಲೆಯಲ್ಲಿ, ಐಎಂಎಫ್‌ಎಲ್ ರಾಜ್ಯದ ಚಿಲ್ಲರೆ ವಹಿವಾಟಿನಲ್ಲಿ ಏಕಸ್ವಾಮ್ಯವನ್ನು ಮೆರೆಯುತ್ತಿದೆ. ಮದ್ಯದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಲಾಭದಾಯಕ ಸಂಸ್ಥೆಯಾಗಿ ಪರಿಣಮಿಸಿದೆ.
ಸಮಾಜ ಸೇವೆ ಸಂಸ್ಥೆಗಳು ಮದ್ಯ ಸೇವನೆ ಹಾನಿಕರ ಎನ್ನುವ ಅಬ್ಬರದ ಪ್ರಚಾರದ ಮಧ್ಯೆಯು, ಓಣಂ ಹಬ್ಬ ಹೊರತುಪಡಿಸಿ, ಕ್ರಿಸ್‌ಮಸ್ ಮತ್ತು ನೂತನ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚಿನ ಮದ್ಯ ಮಾರಾಟವಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.