ಕಬ್ಬಿಣ ಅದಿರು ರಫ್ತು ನಿಷೇಧ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಆದರೆ, ಅಕ್ರಮ ಗಣಿಗಾರಿಕೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದೆ.
ಕಬ್ಬಿಣ ಅದಿರಿನ ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ರಾಜ್ಯ ಸರಕಾರಗಳ ಆದ್ಯ ಕರ್ತವ್ಯವಾಗಿದೆ. ಕೇಂದ್ರ ಸರಕಾರ ಕಬ್ಬಿಣ ಅದಿರು ರಫ್ತು ನಿಷೇಧ ಹೇರುವುದಿಲ್ಲ ಎಂದು ಕೇಂದ್ರದ ಗಣಿಗಾರಿಕೆ ಸಚಿವ ಬಿ.ಕೆ.ಹಾಂಡಿಕ್, ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಓರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಆಯಾ ರಾಜ್ಯ ಸರಕಾರಗಳ ವೈಫಲ್ಯತೆಗೆ ಸಾಕ್ಷಿಯಾಗಿವೆ ಎಂದು ಆರೋಪಿಸಿದ್ದಾರೆ.
ಕಬ್ಬಿಣ ಅದಿರು ರಫ್ತು ನಿಷೇಧಿಸುವ ಬದಲು ಅಕ್ರಮ ಕಬ್ಬಿಣ ಅದಿರು ಉತ್ಪಾದನೆಯನ್ನು ನಿಲ್ಲಿಸುವತ್ತ ಗಮನಹರಿಸಬೇಕಾಗಿದೆ.ಅಕ್ರಮ ಗಣಿಗಾರಿಕೆ ತಡೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಬೇಕಾಗಿದೆ ಎಂದು ರಾಜ್ಯ ಸರಕಾರಗಳಿಗೆ ಸಲಹೆ ನೀಡಿದ್ದಾರೆ.
ದೇಶದ ಕಬ್ಬಿಣ ಅದಿರು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ, ಕಬ್ಬಿಣ ಅದಿರು ರಫ್ತು ನಿಷೇಧಿಸಿಲ್ಲ.ಆದರೆ, ಬಂದರುಗಳಿಗೆ ಕಬ್ಬಿಣ ಅದಿರು ಸಾಗಿಸುವುದನ್ನು ನಿಷೇಧಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ಕು ಉತ್ಪಾದನೆಯಲ್ಲಿ ಕಬ್ಬಿಣ ಅದಿರು ಪ್ರಮುಖ ಪಾತ್ರವಹಿಸುತ್ತದೆ. ವಿಶ್ವದ ಕಬ್ಬಿಣ ಅದಿರು ರಫ್ತು ವಹಿವಾಟಿನಲ್ಲಿ ಭಾರತ ಮೂರನೇ ಸ್ಥಾನಪಡೆದಿದೆ 2009-10ರ ಅವಧಿಯಲ್ಲಿ 218 ಮಿಲಿಯನ್ ಟನ್ ಕಬ್ಬಿಣ ಅದಿರು ಉತ್ಪಾದಿಸಲಾಗಿದ್ದು, 128 ಮಿಲಿಯನ್ ಟನ್ ರಫ್ತು ಮಾಡಲಾಗಿದೆ.