ಆಂಧ್ರಪ್ರದೇಶದ ಟೂರಿಸಂ ಡೆವಲೆಪ್‌ಮೆಂಟ್ ಕಾರ್ಪೋರೇಶನ್ (ಎಪಿಟಿಡಿಸಿ) ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್‌ನೊಂದಿಗೆ ಒಪ್ಪಂದಕ್ಕೆ ಸಹಿಹಾಕಲಿದ್ದು, ತಿರುಪತಿಗೆ ಶೀಘ್ರದಲ್ಲಿ ವಿಮಾನಯಾನ ಪ್ಯಾಕೇಜ್ ಸೌಲಭ್ಯ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಪತಿಗೆ ವಿಮಾನಯಾನ ಪ್ಯಾಕೇಜ್ ಸೌಲಭ್ಯ ಒದಗಿಸಲು ಎಪಿಟಿಡಿಸಿ, ಮುಂಬರುವ 15 ದಿನಗಳೊಳಗಾಗಿ ಜೆಟ್ ಏರ್‌ವೇಸ್‌ನೊಂದಿಗೆ ಸಹಿಹಾಕಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯೇಶ್ ರಂಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಮಾನಯಾನ ಪ್ಯಾಕೇಜ್‌ನಲ್ಲಿ ತಿರುಪತಿಗೆ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಗುವುದು. ಪ್ರವಾಸಿಗರಿಗೆ ವಸತಿ ಸೌಲಭ್ಯ ಒದಗಿಸಿ ಫಾಸ್ಟ್‌ಟ್ರ್ಯಾಕ್ ವ್ಯವಸ್ಥೆಯಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ನಂತರ ಮರಳಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಿದ್ದಾರೆ.
ಪ್ರವಾಸಿಗರು ಪ್ಯಾಕೇಜ್‌ಗಳನ್ನು ಎಪಿಟಿಡಿಸಿ ವೆಬ್‌ಸೈಟ್ ಅಥವಾ ಜೆಟ್‌ಏರ್‌ವೇಸ್ ವೆಬ್‌ಸೈಟ್‌ಗಳಲ್ಲಿ ಪಡೆಯಬಹುದಾಗಿದೆ. ಮುಂಬರುವ ಕೆಲ ದಿನಗಳಲ್ಲಿ ಪ್ಯಾಕೇಜ್ ದರವನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಎಪಿಟಿಡಿಸಿ, ಭುವನೇಶ್ವರ್ ಮತ್ತು ಅಹಮದಾಬಾದ್ ನಗರಗಳಲ್ಲಿ ಶೀಘ್ರದಲ್ಲಿ ಮಾಹಿತಿ ಹಾಗೂ ಮುಂಗಡ ಬುಕ್ಕಿಂಗ್ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ರಂಜನ್ ತಿಳಿಸಿದ್ದಾರೆ.