ಬೀದರ್‌ನಲ್ಲಿ ರಿಲಯನ್ಸ್ ಕಂಪನಿಯಿಂದ ಅನಿಲ(ಗ್ಯಾಸ್) ಆಧರಿತ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಶೀಘ್ರವೇ ಕಂಪನಿಯವರ ಜತೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಜಿಲ್ಲೆಯಿಂದ ರಿಲಯನ್ಸ್ ಗ್ಯಾಸ್ ಪೈಪ್ಲೈನ್ ಹಾದುಹೋಗಿದೆ. ವಿದ್ಯುತ್ ಘಟಕ ಸ್ಥಾಪಿಸುವ ಮೂಲಕ ಇದರ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶವಿದೆ. ಘಟಕಕ್ಕೆ ಅಗತ್ಯ ನೀರು ಒದಗಿಸಲು ಸರಕಾರ ಸಿದ್ಧವಿದೆ. ಜಿಲ್ಲೆಯ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕುವಷ್ಟು ಸಾಮರ್ಥ್ಯದ ಘಟಕ ಇದಾಗಲಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಉದ್ಭವಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಬರುವ ಮೂರು ವರ್ಷದಲ್ಲಿ ಶಾಶ್ವತ ಪರಿಹಾರ ರೂಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಹಾಗೂ ಅವಕಾಶಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುವುದು. ಉದ್ದೇಶಿತ ಯೋಜನೆಗಳೆಲ್ಲ ಪೂರ್ಣಗೊಂಡಲ್ಲಿ ಕರ್ನಾಟಕ ಬೇರೆ ರಾಜ್ಯಗಳಿಗೆ ವಿದ್ಯುತ್ ಕೊಡುವಷ್ಟು ಶಕ್ತವಾಗಲಿದೆ ಎಂದರು.
ಬೀದರ್ ನಗರದ ಮೂಲಸೌಲಭ್ಯಕ್ಕಾಗಿ ಎಸಿಎ ಯೋಜನೆಯಡಿ 136 ಕೋಟಿ ರೂ. ಅನುದಾನ ಒದಗಿಸುವ ಘೋಷಣೆ ಮಾಡಲಾಗಿತ್ತು. ಆದರೆ ನಂತರ ಇದನ್ನು 75 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ. ಉಳಿದ ಹಣಕ್ಕೆ ಏಕೆ ಕತ್ತರಿ ಹಾಕಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರೀಶೀಲನೆ ನಡೆಸಿ ಅಗತ್ಯ ಅನುದಾನ ಕಲ್ಪಿಸುವುದಾಗಿ ಸ್ಪಷ್ಟಪಡಿಸಿದರು.
ಬೀದರ್ ನಗರದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಇದೇ ವರ್ಷ ಆರಂಭಿಸಲಾಗುವುದು. ಬಸವಕಲ್ಯಾಣ ಅಭಿವೃದ್ದಿ ಮಂಡಳಿಗೆ ಪ್ರಸಕ್ತ ಸಾಲಿನಲ್ಲಿ ಸದ್ಯ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶೀಘ್ರವೇ 10 ಕೋಟಿ ರೂ. ಒದಗಿಸಲಾಗುವುದು. ಬಸವಕಲ್ಯಾಣ ಮಂಡಳಿಗೆ ಅನುದಾನದ ಕೊರತೆ ಇಲ್ಲ ಎಂದರು.