ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್(ಎಂಸಿಎಫ್) ಶೇರುಗಳನ್ನು ಮಾರಾಟ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲವೆಂದು ಯುನೈಟೆಡ್ ಬ್ರೆವೆರಿಸ್ ಗ್ರೂಪ್ ಮುಖ್ಯಸ್ಥ ವಿಜಯ್ ಮಲ್ಯ ಹೇಳಿದ್ದಾರೆ.
ಶೇರುಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಈಗಾಗಲೇ ರಿಲಯನ್ಸ್ ಇಂಡಸ್ಟೀಸ್‌ನೊಂದಿಗೆ ಮಾತುಕತೆ ನಡೆದಿದೆ ಎನ್ನುವ ಮಾಧ್ಯಮಗಳ ವರದಿಗಳು ಆಧಾರರಹಿತವಾಗಿವೆ. ಶೇರುಗಳ ಮಾರಾಟ ಕುರಿತಂತೆ ಇಲ್ಲಿಯವರೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರನ್ನು ಭೇಟಿ ಮಾಡಿಲ್ಲ, ಅಥವಾ ಮಾತುಕತೆ ನಡೆಸಿಲ್ಲ ಎಂದು ಎಂಸಿಎಫ್ ಮುಖ್ಯಸ್ಥ ಮಲ್ಯ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಮಾತನಾಡಿ, ಫರ್ಟಿಲೈಸರ್ ಘಟಕದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮತ್ತಷ್ಟು ತಾಜಾ ಹೂಡಿಕೆಗೆ ಅವಕಾಶ ನೀಡುವಂತೆ ವಿಜಯ್ ಮಲ್ಯ ಕೋರಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಮಾತುಕತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಚಿವ ಪವಾರ್ ನಿರಾಕರಿಸಿದರು.
ಯುನೈಟೆಡ್ ಬ್ರೆವೆರಿಸ್ ಗ್ರೂಪ್, ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್(ಎಂಸಿಎಫ್)ಕಂಪೆನಿಯಲ್ಲಿ ಶೇ.30.44ರಷ್ಟು ಶೇರುಗಳ ಪಾಲನ್ನು ಹೊಂದಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಕ್ತಾರರನ್ನು ಸಂಪರ್ಕಿಸಿದಾಗ, ಮಾರುಕಟ್ಟೆಯ ವಹಿವಾಟುಗಳನ್ನು ಬಹಿರಂಗಪಡಿಸಲಾಗದು ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.