ದೇಶದ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಸಂಸ್ಥೆ, ಕಚ್ಚಾ ವಸ್ತುಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಮುಂಬರುವ ಅಕ್ಟೋಬರ್-ಡಿಸೆಂಬರ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ ವಾಹನಗಳ ದರವನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ಜೂನ್ ತಿಂಗಳ ಅವಧಿಯಲ್ಲಿ ವಾಹನ ದರಗಳಲ್ಲಿ ಶೇ.1ರಿಂದ ಶೇ.1.5ರಷ್ಟು ಹೆಚ್ಚಳಗೊಳಿಸಿತ್ತು. ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಮತ್ತೆ ದರ ಹೆಚ್ಚಳ ಘೋಷಿಸಲಾಗುವುದು ಎಂದು ಟಿವಿಎಸ್ ಮೋಟಾರ್ ಕಂಪೆನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಚ್.ಎಸ್.ಗೊಯಿಂಡಿ ತಿಳಿಸಿದ್ದಾರೆ.
ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದ್ದು, ದರಗಳ ಹೆಚ್ಚಳದಿಂದಾಗಿ ಮುಂಬರುವ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.
ಟಿವಿಎಸ್ ಮೋಟಾರ್ ಕಂಪೆನಿ ಜಿವೆ, ಅಪಾಚೆ ಆರ್‌ಟಿಆರ್ ಮತ್ತು ಸ್ಟಾರ್ ಸಿಟಿ ಹಾಗೂ ಸ್ಕೂಟರ್‌ಗಳಾದ ಸ್ಕೂಟಿ ಪೆಪ್ ಮತ್ತು ವೆಗೊ ಮಾಡೆಲ್‌ಗಳ ವಾಹನಗಳನ್ನು ಮಾರಾಟ ಮಾಡುತ್ತಿದೆ.
ಏತನ್ಮಧ್ಯೆ, ಅಗಸ್ಟ್ ತಿಂಗಳ ಅವಧಿಯಲ್ಲಿ ಕಂಪೆನಿಯ ಒಟ್ಟು ವಾಹನಗಳ ಮಾರಾಟದಲ್ಲಿ ಶೇ.34ರಷ್ಟು ಏರಿಕೆಯಾಗಿ 170,735 ವಾಹನಗಳನ್ನು ಮಾರಾಟ ಮಾಡಲಾಗಿದೆ.
ಒಟ್ಟು ದ್ವಿಚಕ್ರ ವಾಹನಗಳ ಮಾರಾಟ ಅಗಸ್ಟ್ ತಿಂಗಳ ಅವಧಿಯಲ್ಲಿ ಶೇ.32ರಷ್ಟು ಏರಿಕೆಯಾಗಿ 167,109 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಅಗಸ್ಟ್ ತಿಂಗಳ ಅವಧಿಯಲ್ಲಿ 126,842 ವಾಹನಗಳನ್ನು ಮಾರಾಟ ಮಾಡಲಾಗಿತ್ತು.