ತರಕಾರಿ ದರಗಳ ಇಳಿಕೆಯ ಮಧ್ಯೆಯು ವಾರ್ಷಿಕ ಆಹಾರ ಹಣದುಬ್ಬರ ದರ, ಅಗಸ್ಟ್ 21ಕ್ಕೆ ವಾರಂತ್ಯಗೊಂಡಂತೆ ಶೇ.10.86ಕ್ಕೆ ಏರಿಕೆಯಾಗಿದೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಆಹಾರ ಹಣದುಬ್ಬರ ಇಳಿಕೆ ಕಂಡಿತ್ತು.
ಕಳೆದ ಅಗಸ್ಟ್ 14ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.10.05ಕ್ಕೆ ಇಳಿಕೆ ಕಂಡಿತ್ತು. ಹಿಂದಿನ ವಾರದ ಅವಧಿಯಲ್ಲಿ ಶೇ.10.35ಕ್ಕೆ ತಲುಪಿತ್ತು.
ವಾರ್ಷಿಕ ಆದಾರದ ಹಿನ್ನೆಲೆಯಲ್ಲಿ ಆಲೂಗಡ್ಡೆ ದರದಲ್ಲಿ ಶೇ.51ರಷ್ಟು ಇಳಿಕೆಯಾಗಿದ್ದು, ಒಟ್ಟಾರೆ ತರಕಾರಿ ದರಗಳಲ್ಲಿ ಶೇ.9.90ರಷ್ಟು ಇಳಿಕೆ ಕಂಡಿದೆ. ಈರುಳ್ಳಿ ದರದಲ್ಲಿ ಕೂಡಾ ಶೇ.8.97ರಷ್ಟು ಇಳಿಕೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ದ್ವಿದಳ ಧಾನ್ಯ ಹಾಗೂ ಭತ್ತದ ದರಗಳಲ್ಲಿ ಏರಿಕೆಯಾಗಿದ್ದರಿಂದ, ಧಾನ್ಯಗಳ ದರಗಳಲ್ಲಿ ಶೇ.6.76ರಷ್ಟು ಏರಿಕೆಯಾಗಿದೆ.
ಭತ್ತ ಮತ್ತು ಗೋಧಿಯ ದರದಲ್ಲಿ ಕ್ರಮವಾಗಿ ಶೇ.8.05 ಹಾಗೂ ಶೇ.7ರಷ್ಟು ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಅಗಸ್ಟ್ ತಿಂಗಳಿಗೆ ಹೋಲಿಸಿದಲ್ಲಿ ಇತರ ಆಹಾರ ವಸ್ತುಗಳಾದ ಹಾಲು ದರದಲ್ಲಿ ಶೇ.18.22ರಷ್ಟು ಇಳಿಕೆಯಾಗಿದ್ದು, ಹಣ್ಣುಗಳ ದರಗಳಲ್ಲಿ ಶೇ.9.27ರಷ್ಟು ಏರಿಕೆಯಾಗಿದೆ
ಕಳೆದ ವರ್ಷದ ಬಹುತೇಕ ತಿಂಗಳುಗಳಲ್ಲಿ ಎರಡಂಕಿಗೆ ತಲುಪಿದ್ದ ಆಹಾರ ಹಣದುಬ್ಬರ ದರ, ಪ್ರಸಕ್ತ ವರ್ಷದ ಜುಲೈ ತಿಂಗಳ ಅವಧಿಯಲ್ಲಿ ಒಂದಂಕಿಗೆ ಕುಸಿತ ಕಂಡಿತ್ತು.