ಕಳೆದೆರಡು ವರ್ಷಗಳಲ್ಲಿ ಎರಡು ಬ್ಯಾಂಕುಗಳನ್ನು ವಿಲೀನಗೊಳಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ಇನ್ನುಳಿದ ಸಹವರ್ತಿ ಬ್ಯಾಂಕುಗಳನ್ನೂ ಮಾತೃಸಂಸ್ಥೆ ಜತೆ ವಿಲೀನಗೊಳಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಎಲ್ಲಾ ಸಹವರ್ತಿ ಬ್ಯಾಂಕುಗಳನ್ನು ವಿಲೀನಗೊಳಿಸುವ ಯೋಚನೆ ತಲೆಯಲ್ಲಿದೆ. ಆದರೆ ಈ ಕುರಿತು ಪರಿಶೀಲನೆ ನಡೆಸಬೇಕಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಒ.ಪಿ. ಭಟ್ ತಿಳಿಸಿದ್ದಾರೆ.
ಈ ಕುರಿತು ನಾವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಕಾರ ಮತ್ತು ಸಂಬಂಧಪಟ್ಟ ಬ್ಯಾಂಕುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕಿನ ಸಣ್ಣ ಸಹವರ್ತಿ ಬ್ಯಾಂಕ್ 'ಸ್ಟೇಟ್ ಬ್ಯಾಂಕ್ ಆಫ್ ಇಂದೋರ್'ನ್ನು ಕಳೆದ ತಿಂಗಳಷ್ಟೇ ವಿಲೀನಗೊಳಿಸಲಾಗಿತ್ತು. ಈ ಬ್ಯಾಂಕಿನ 437 ಕೋರ್ ಬ್ಯಾಂಕಿಂಗ್ ಶಾಖೆಗಳು, ಅನಿವಾಸಿ ಭಾರತೀಯರಿಗಾಗಿನ 66 ಔಟ್‌ಲೆಟ್‌ಗಳು ಸೇರಿದಂತೆ ಎಲ್ಲಾ 503 ಶಾಖೆಗಳು 2010 ಆಗಸ್ಟ್ 26ರಂದು ಭಾರತೀಯ ಸ್ಟೇಟ್ ಬ್ಯಾಂಕ್ ಭಾಗವಾಗಿ ಮಾರ್ಪಟ್ಟಿದೆ.
ಇದೇ ನಿಟ್ಟಿನಲ್ಲಿ ಇದಕ್ಕೂ ಮೊದಲು ವಿಲೀನಗೊಂಡಿದ್ದ ಮತ್ತೊಂದು ಬ್ಯಾಂಕ್ 'ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ'. ಇದನ್ನು 2008ರ ಆಗಸ್ಟ್ ತಿಂಗಳಲ್ಲಿ ಎಸ್‌ಬಿಐ ಜತೆ ವಿಲೀನಗೊಳಿಸಲಾಗಿತ್ತು.
ಎರಡು ಬ್ಯಾಂಕುಗಳನ್ನು ತನ್ನೊಂದಿಗೆ ವಿಲೀನಗೊಳಿಸಿರುವ ಸ್ಟೇಟ್ ಬ್ಯಾಂಕ್ ಇದೀಗ ಸ್ಟೇಟ್ ಬ್ಯಾಂಕ್ ಅಫ್ ಬಿಕನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ತ್ರವಾಂಕೋರ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವ ಯೋಚನೆಯಲ್ಲಿದೆ.