ಜಪಾನ್ ಮೂಲದ ಸುಝುಕಿ ಮೋಟಾರ್ ಕಾರ್ಪೋರೇಶನ್(ಎಸ್‌ಎಂಸಿ) ಹಾಗೂ ಜರ್ಮನಿ ಮೂಲದ ವೊಕ್ಸ್‌ವಾಗೆನ್ ಮಧ್ಯ ಕಳೆದ ವರ್ಷದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಒಪ್ಪಂದವೇರ್ಪಟ್ಟಿದ್ದು,ನಾಲ್ಕು ಲಕ್ಷ ರೂಪಾಯಿಗಳ ದರಕ್ಕಿಂತ ಕಡಿಮೆ ಮೌಲ್ಯದ ಕಾರುಗಳ ಅಭಿವೃದ್ಧಿಗೆ ನೆರವಾಗಲಿದೆ.
ವೊಕ್ಸ್‌ವಾಗೆನ್ ಪ್ರಸ್ತುತ ಎರಡು ಬಜೆಟ್ ಮಾಡೆಲ್‌ಗಳನ್ನು ಹೊಂದಿದೆ. ಪೋಲೊ (1.2 ಲೀಟರ್) ಮೌಲ್ಯ 4.42 ಲಕ್ಷ ರೂಪಾಯಿಗಳಾಗಿದ್ದು, ಸ್ಕೊಡಾ ಫ್ಯಾಬಿಯಾ (1.2 ಲೀಟರ್ ಪೆಟ್ರೋಲ್)ದರವನ್ನು 5.08 ಲಕ್ಷ ರೂಪಾಯಿಗಳ ದರವನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ಕಂಪೆನಿಗಳು ಕಳೆದ ವರ್ಷದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಜಾಗತಿಕ ಒಪ್ಪಂದ ಮಾಡಿಕೊಂಡಿದ್ದು, ವೊಕ್ಸ್‌ವಾಗೆನ್ ಕಂಪೆನಿ ಸುಝುಕಿ ಕಂಪೆನಿಯಲ್ಲಿ ಶೇ.19.9ರಷ್ಟು ಪಾಲನ್ನು ಹೊಂದಿದೆ. ಉಭಯ ಕಂಪೆನಿಗಳು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಲು ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಸುಝುಕಿ ಮೋಟಾರ್ ಮುಖ್ಯಸ್ಥ ಒಸಾಮು ಸುಝುಕಿ,ಮುಂದಿನ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ವೊಕ್ಸ್‌ವಾಗೆನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉಭಯ ಕಂಪೆನಿಗಳು ಕನಿಷ್ಠ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.