ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಐದು ತಿಂಗಳ ಅವಧಿಯ ನೇರ ತೆರಿಗೆ ಸಂಗ್ರಹದಲ್ಲಿ ಶೇ.13.91ರಷ್ಟು ಏರಿಕೆಯಾಗಿ 1,00,112 ಕೋಟಿ ರೂಪಾಯಿಗಳಿಗೆ ತಲುಪಿದೆ ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಏಪ್ರಿಲ್-ಅಗಸ್ಟ್ ತಿಂಗಳ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ 87,888 ಕೋಟಿ ರೂಪಾಯಿಗಳಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ನೇರ ತೆರಿಗೆ ಮಂಡಳಿ ಬಿಡುಗಡೆಗೊಳಿಸಿದ ಅಂಕಿ ಅಂಶಗಳಲ್ಲಿ ಕಾರ್ಪೋರೇಟ್ ತೆರಿಗೆ ಸಂಗ್ರಹ ಏಪ್ರಿಲ್-ಅಗಸ್ಟ್ ತಿಂಗಳ ಅವಧಿಯಲ್ಲಿ ಶೇ.17.05ರಷ್ಟು ಏರಿಕೆಯಾಗಿ 57,750 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಅವಧಿಯಲ್ಲಿ 49,339 ಕೋಟಿ ರೂಪಾಯಿಗಳಾಗಿತ್ತು.
ಏತನ್ಮಧ್ಯೆ, ಸೆಕ್ಯೂರೀಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್, ಬೆನ್‌ಫಿಟ್ ಟ್ಯಾಕ್ಸ್ ಮತ್ತು ಬ್ಯಾಂಕಿಂಗ್ ಕ್ಯಾಶ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಶೇ.9.68ರಷ್ಟು ಏರಿಕೆಯಾಗಿ 38,491ಕೋಟಿ ರೂಪಾಯಿಗಳಿಂದ 42,217ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಬಿಹಾರ್ ಮತ್ತು ಜಾರ್ಖಂಡ್ ಸೇರಿದಂತೆ ಪಾಟ್ನಾ ವಲಯದಲ್ಲಿ, ವ್ಯಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಶೇ.90ರಷ್ಟು ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.