ದೇಶದ ಸಗಟು ಸೂಚ್ಯಂಕ ಆಹಾರ ಹಣದುಬ್ಬರ ದರ, ಮುಂಬರುವ ಡಿಸೆಂಬರ್ ವೇಳೆಗೆ ಶೇ.7ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಲೆಕ್ಕಪರಿಶೋಧಕ ಸಂಸ್ಥೆಯ ಮುಖ್ಯಸ್ಥ ಟಿಸಿಎ ಅನಂತ್ ತಿಳಿಸಿದ್ದಾರೆ.
ದೇಶದ ಆಹಾರ ಹಣದುಬ್ಬರ ದರ ಏರಿಕೆಯಿಂದ ಜನಸಾಮಾನ್ಯರು ಆತಂಕ ಎದುರಿಸುವ ಸ್ಥಿತಿ ಬಂದಿದೆ. ಆರಂಭದಲ್ಲಿ ಅಹಾರ ದರಗಳ ಏರಿಕೆ ಹಾಗೂ ಉತ್ಪಾದಕ ವಸ್ತುಗಳ ಏರಿಕೆಯಿಂದಾಗಿ ಜುಲೈ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.9.97ರಿಂದ ಶೇ.10.55ಕ್ಕೆ ಏರಿಕೆಯಾಗಿತ್ತು.
ಡೊ ಜೊನ್ಸ್ ನ್ಯೂಸ್‌ವೈರ್ಸ್‌ಗೆ ಸಂದರ್ಶನ ನೀಡಿದ ಅನಂತ್, ಗ್ರಾಹಕ ಸೂಚ್ಯಂಕ ದರ ಇಳಿಕೆಯಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಮುಂಗಾರು ಮಳೆ ಉತ್ತಮವಾಗಿದೆ. ಮುಂಬರುವ ದಿನಗಳಲ್ಲಿ ಆಹಾರ ಹಣದುಬ್ಬರ ದರ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ದೇಶಧ ಆರ್ಥಿಕತೆ ಶೇ.8.8ಕ್ಕೆ ಏರಿಕೆಯಾಗಿದೆ. ಡಿಸೆಂಬರ್ ವೇಳೆಗೆ ಆರ್ಥಿಕತೆ ಸಂಪೂರ್ಣ ಸುಸ್ಥಿತಿಗೆ ಬರುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷದ ಅವಧಿಯಲ್ಲಿ ಕೃಷಿ, ಸೇವಾ ಕ್ಷೇತ್ರ ಪ್ರಬಲವಾಗಿ ಹೊರಹೊಮ್ಮುವ ಸಾಧ್ಯತೆಗಳಿದ್ದು,ಉತ್ಪಾದಕ ಕ್ಷೇತ್ರ ಕುಸಿಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಲೆಕ್ಕಪರಿಶೋಧಕ ಸಂಸ್ಥೆಯ ಮುಖ್ಯಸ್ಥ ಟಿಸಿಎ ಅನಂತ್ ತಿಳಿಸಿದ್ದಾರೆ.