ಜುಲೈನಲ್ಲಿ 17 ಮಿಲಿಯನ್ ಮೊಬೈಲ್ ಗ್ರಾಹಕರ ಸೇರ್ಪಡೆ:ಟ್ರಾಯ್
ನವದೆಹಲಿ, ಬುಧವಾರ, 8 ಸೆಪ್ಟೆಂಬರ್ 2010( 12:46 IST )
ಕಳೆದ ಜುಲೈ ತಿಂಗಳ ಅವಧಿಯಲ್ಲಿ ನೂತನವಾಗಿ 17 ಮಿಲಿಯನ್ ನೂತನ ಮೊಬೈಲ್ ಗ್ರಾಹಕರು ಸೇರ್ಪಡೆಯಾಗಿದ್ದು, ದೇಶದಲ್ಲಿ ಒಟ್ಟು ಮೊಬೈಲ್ ಬಳಕೆದಾರರ ಸಂಖ್ಯೆ 652.42 ಮಿಲಿಯನ್‌ಗಳಿಗೆ ತಲುಪಿದೆ ಎಂದು ಟೆಲಿಕಾಂ ರೆಗ್ಯೂಲೆಟರಿ ಅಥಾರಿಟಿ ಆಫ್ ಇಂಡಿಯಾ ಟ್ರಾಯ್ ಹೇಳಿದೆ.
ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಜೂನ್ ತಿಂಗಳ ಅವಧಿಯಲ್ಲಿ 635.51 ಮಿಲಿಯನ್ ಗ್ರಾಹಕರಿದ್ದು, ಜುಲೈ ತಿಂಗಳ ಅಂತ್ಯಕ್ಕೆ ಶೇ.2.66ರಷ್ಟು ಏರಿಕೆಯಾಗಿ 652.42 ಮಿಲಿಯನ್ ಬಳಕೆದಾರರನ್ನು ಹೊಂದಿದಂತಾಗಿದೆ.
ಏತನ್ಮಧ್ಯೆ, ಒಟ್ಟು ಟೆಲಿಫೋನ್ ಬಳಕೆದಾರರ ಸಂಖ್ಯೆ(ಸ್ಥಿರ ಹಾಗೂ ಮೊಬೈಲ್)ದೇಶದಲ್ಲಿ 688.38 ಮಿಲಿಯನ್‌ಗಳಿಗೆ ತಲುಪಿದೆ. ಜೂನ್ ತಿಂಗಳ ಅವಧಿಯಲ್ಲಿ 671.69 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು.
ದೇಶದಲ್ಲಿ ಒಟ್ಟು ಟೆಲಿಸಾಂದ್ರತೆ(ಪ್ರತಿ 100 ಜನರಿಗೆ ಒಂದು ಟೆಲಿಫೋನ್) ಶೇ.58.17ಕ್ಕೆ ತಲುಪಿದೆ ಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಭಾರ್ತಿ ಏರ್‌ಟೆಲ್ 2.6 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಸೇರ್ಪಡೆಗೊಳಿಸುವ ಮೂಲಕ, ಒಟ್ಟು 139.2 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದೆ ಎಂದು ಮೂಲಗಳು ತಿಳಿಸಿವೆ.