ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ,ಮುಂಬರುವ 2010-13ರ ವೇಳೆಗೆ ಕಂಪೆನಿಯ ಒಟ್ಟು ಹೂಡಿಕೆ 6,125 ಕೋಟಿ ರೂಪಾಯಿಗಳಿಗೆ ತಲುಪಲಿದೆ. ಮನೇಸರ್‌ನಲ್ಲಿ ನೂತನ ಘಟಕವನ್ನು ಸ್ಥಾಪಿಸಲು 1,925 ಕೋಟಿ ರೂಪಾಯಿಗಳ ವೆಚ್ಚವನ್ನು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶೇರುದಾರರನ್ನು ಉದ್ದೇಶಿಸಿ ಮಾತನಾಡಿದ ಸುಝುಕಿ ಮೋಟಾರ್ ಕಾರ್ಪೋರೇಶನ್ ಮುಖ್ಯಸ್ಥ ಒಸಾಮು ಸುಝುಕಿ, ಮನೇಸರ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನೂತನ ಘಟಕದಲ್ಲಿ ವಾರ್ಷಿಕವಾಗಿ 2.5 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯವಿದ್ದು,35 ಬಿಲಿಯನ್ ಯೆನ್ ವೆಚ್ಚ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮನೇಸರ್ ಘಟಕದೊಂದಿಗೆ ಮಾರುತಿ ಸುಝುಕಿ ಕಂಪೆನಿಯ ಒಟ್ಟು ವಾರ್ಷಿಕ ಉತ್ಪನ್ನ ಸಾಮರ್ಥ್ಯ 1.75ಮಿಲಿಯನ್‌ಗಳಿಗೆ ತಲುಪಲಿದೆ. ಪ್ರಸ್ತುತ ವಾರ್ಷಿಕವಾಗಿ 1.2 ಮಿಲಿಯನ್ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಣೆ ನೀಡಿದ್ದಾರೆ.
ಮನೇಸರ್‌ನಲ್ಲಿ ಸ್ಥಾಪಿಸಲಿರುವ ಘಟಕ 2012ರ ವರ್ಷಾಂತ್ಯಕ್ಕೆ ಅಥವಾ 2013ರ ಆರಂಭಿಕ ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸುಝುಕಿ ಮೋಟಾರ್ ಕಾರ್ಪೋರೇಶನ್ ಮುಖ್ಯಸ್ಥ ಒಸಾಮು ಸುಝುಕಿ ತಿಳಿಸಿದ್ದಾರೆ.