ನವದೆಹಲಿ, ಶುಕ್ರವಾರ, 10 ಸೆಪ್ಟೆಂಬರ್ 2010( 12:51 IST )
ಕೈಗಾರಿಕೆ ವೃದ್ಧಿ ದರ ಕುಸಿಯಲಿದೆ ಎನ್ನುವ ಆತಂಕಗಳ ಮಧ್ಯೆಯು, ಜುಲೈ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.7.2ರಿಂದ ಶೇ.13.8ಕ್ಕೆ ಚೇತರಿಕೆ ಕಂಡು ಕೈಗಾರಿಕೆ ವಲಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಉತ್ಪಾದಕ ಕ್ಷೇತ್ರವನ್ನು ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದಲ್ಲಿ, ಜುಲೈ ತಿಂಗಳ ಅವಧಿಯಲ್ಲಿ ಶೇ.7.4ರಿಂದ ಶೇ.15ಕ್ಕೆ ಏರಿಕೆಯಾಗಿದೆ. ಗಣಿಗಾರಿಕೆ ಕ್ಷೇತ್ರ ಶೇ.8.7ರಿಂದ ಶೇ.9.7ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ ವಿದ್ಯುತ್ ಉತ್ಪಾದನೆ ಕ್ಷೇತ್ರ ಶೇ.4.2ರಿಂದ ಶೇ.3.7ಕ್ಕೆ ಕುಸಿತ ಕಂಡಿದೆ.
ಬಂಡವಾಳ ಯಂತ್ರಗಳು ಮತ್ತು ಗೃಹೋಪಕರಣ ವಸ್ತುಗಳ ಉತ್ಪಾದನೆಯಲ್ಲಿ ಕ್ರಮವಾಗಿ ಶೇ.63 ಮತ್ತು ಶೇ.22.1ರಷ್ಟು ಚೇತರಿಕೆ ಕಂಡಿದೆ.
ಇದಕ್ಕಿಂತ ಮೊದಲು, ಕೈಗಾರಿಕೆ ತಜ್ಞರು ಕೈಗಾರಿಕೆ ವೃದ್ಧಿ ದರ ಒಂದಂಕಿಗೆ ಕುಸಿಯಲಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.