ಅಮೆರಿಕದ ಹೊರಗುತ್ತಿಗೆ ನಿಷೇಧ ವಹಿವಾಟಿಗೆ ಸೂಕ್ತವಲ್ಲ:ವಿಪ್ರೋ
ಬೆಂಗಳೂರು, ಶುಕ್ರವಾರ, 10 ಸೆಪ್ಟೆಂಬರ್ 2010( 17:59 IST )
ಸರಕಾರಿ ಪ್ರಾಯೋಜಿತ ಮಾಹಿತಿ ತಂತ್ರಜ್ಞಾನ ಯೋಜನೆಗಳಿಗೆ ಹೊರಗುತ್ತಿಗೆ ನೀಡುವುದನ್ನು ನಿಷೇಧಿಸಿದ ಅಮೆರಿಕದ ಒಹಿಯೊ ರಾಜ್ಯದ ನಿರ್ಧಾರವನ್ನು ಭಾರತದ ಇನ್ಫೋಸಿಸ್ ನಂತರ ವಿಪ್ರೋ ಕಂಪೆನಿ ಕಳವಳ ವ್ಯಕ್ತಪಡಿಸಿದೆ.
ಭಾರತದ ಸಾಫ್ಟ್‌ವೇರ್ ರಫ್ತು ಸೇವೆಯಲ್ಲಿ ಮೂರನೇ ಸ್ಥಾನದಲ್ಲಿರುವ ವಿಪ್ರೋ, ಅಮೆರಿಕದ ಒಹಿಯೊ ರಾಜ್ಯದ ನಿಲುವು ಸ್ವಾರ್ಥತೆಯಿಂದ ಕೂಡಿದೆ ಎಂದು ಟೀಕಿಸಿದೆ.ಸ್ವಾರ್ಥತೆ ವಹಿವಾಟಿಗೆ ಪೂರಕವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದೆ.
ಇನ್ಫೋಸಿಸ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಿ, ಅಮೆರಿಕ ಹೊರಗುತ್ತಿಗೆ ಸೇವೆಗಳನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ ಎನ್ನುವ ವರದಿಗಳು ಕಳವಳ ಮೂಡಿಸಿವೆ ಎಂದು ಹೇಳಿದ್ದಾರೆ.
ಅಮೆರಿಕದದಿಂದ ಶೇ.60ರಷ್ಟು ರಫ್ತು ಆದಾಯವನ್ನು ಪಡೆಯುತ್ತಿರುವ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಅಮೆರಿಕ ಸರಕಾರದ ನಿಲುವಿನ ಬಗ್ಗೆ ಭಾರಿ ಕಳವಳ ವ್ಯಕ್ತಪಡಿಸಿವೆ.
ದೇಶದ ಬಹುತೇಕ ಸಾಫ್ಟ್‌ವೇರ್ ಕಂಪೆನಿಗಳು ಅಮೆರಿಕದ ಖಾಸಗಿ ಕಂಪೆನಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವುದರಿಂದ, ಹೊರಗುತ್ತಿಗೆ ನಿಷೇಧದಿಂದ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಸಾಫ್ಟ್‌ವೇರ್ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.