ಕೇಂದ್ರ ಸರಕಾರಿ ನೌಕರರಿಗೆ ಸರಕಾರ ಬಂಪರ್ ಕೊಡುಗೆಯನ್ನು ಘೋಷಿಸಿದೆ. ಬುಧವಾರದಂದು ಭವಿಷ್ಯ ಬಡ್ಡಿ ದರದಲ್ಲಿ ಶೇ.1ರಷ್ಟು ಏರಿಕೆಯನ್ನು ಘೋಷಿಸಿದ್ದ ಕೇಂದ್ರ ಸರಕಾರ, ಇದೀಗ ಶೇ.10ರಷ್ಟು ತುಟ್ಟಿಭತ್ತೆಯಲ್ಲಿ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.
ಹಬ್ಬದ ಸೀಜನ್ ಮುಂದಿರುವಂತೆ, ಕೇಂದ್ರ ಸರಕಾರಿ ನೌಕರರ ಮೂಲವೇತನದಲ್ಲಿ ಶೇ.45ರಷ್ಟು ತುಟ್ಟಿಭತ್ತೆಯನ್ನು ಹೆಚ್ಚಳಗೊಳಿಸಿದ್ದು, ಸುಮಾರು 88 ಲಕ್ಷ ಉದ್ಯೋಗಿಗಳು ಹಾಗೂ ಪಿಂಚಿಣಿದಾರರಿಗೆ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರಿ ನೌಕರರಿಗೆ ಶೇ.10ರಷ್ಟು ತುಟ್ಟಿಭತ್ತೆಯನ್ನು ಹೆಚ್ಚಳಗೊಳಿಸಿದ್ದರಿಂದ, ಕೇಂದ್ರ ಸರಕಾರಕ್ಕೆ ಹೆಚ್ಚುವರಿಯಾಗಿ ವಾರ್ಷಿಕ 9,303.2 ಕೋಟಿ ರೂಪಾಯಿಗಳಷ್ಟು ಹೊರೆಯಾಗಲಿದೆ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ.
ಕೇಂದ್ರ ಸರಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಜುಲೈ 1, 2010ರಿಂದ ನೂತನ ತುಟ್ಟಿಭತ್ಯೆಯನ್ನು ಜಾರಿಗೊಳಿಸಲಾಗುತ್ತದೆ. ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 6,202.1ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.