ಮೊಬೈಲ್ ಹ್ಯಾಂಡ್‌ಸೆಟ್ ವಹಿವಾಟಿನಲ್ಲಿ ನಷ್ಟ ಎದುರಾಗಿದ್ದರಿಂದ ದಕ್ಷಿಣ ಕೊರಿಯಾ ಮೂಲದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಮ್ ಯೊಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಯೊಂಗ್, ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಎಲ್‌ಜಿ ಇಂಟರ್‌ನ್ಯಾಷನಲ್ ಉಪಾಧ್ಯಕ್ಷ ಕೂ ಬೊನ್-ಜೂನ್ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ತಿಂಗಳಿಂದ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಶುಕ್ರವಾರದಂದು ನಡೆದ ಅಡಳಿತ ಮಂಡಳಿಯ ಸಭೆಯಲ್ಲಿ ನ್ಯಾಮ್ ಯೊಂಗ್, ನಷ್ಟದ ಹೊಣೆಯನ್ನು ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
62 ವರ್ಷ ವಯಸ್ಸಿನ ನ್ಯಾಮ್ ಯೊಂಗ್, 2007ರಲ್ಲಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 59 ವರ್ಷ ವಯಸ್ಸಿನ ಕೂ ಬೊನ್ ಕೂಡಾ ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.