ನೋಕಿಯಾ ಸಾಮ್‌ಸುಂಗ್‌ನಂತೆ ಇದೀಗ ಭಾರ್ತಿ ಏರ್‌ಟೆಲ್ ಸಂಸ್ಥೆ ಕೂಡಾ ಮೊಬೈಲ್ ಹ್ಯಾಂಡ್‌ಸೆಟ್ ವಹಿವಾಟಿಗೆ ಪ್ರವೇಶಿಸಿದ್ದು, ಆರಂಭದಲ್ಲಿ 1750-7000 ರೂಪಾಯಿಗಳ ದರದ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ದೇಶದ ಟೆಲಿಕಾಂ ಕ್ಷೇತ್ರದಲ್ಲಿ 140 ಮಿಲಿಯನ್ ಗ್ರಾಹಕರೊಂದಿಗೆ ಅಗ್ರಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್, ಇತ್ತಿಚೆಗೆ ದಕ್ಷಿಣ ಆಫ್ರಿಕಾದ ಝೈನ್ ಟೆಲಿಕಾಂ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಭಾರ್ತಿ ಗ್ರೂಪ್‌ನ ಬೀ ಟೆಲಿಟೆಕ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಸ್ವಾನೆ ಮಾತನಾಡಿ, ದೇಶದ ಮೊಬೈಲ್ ಮಾರುಕಟ್ಟೆ ವಿಶಾಲವಾಗಿದ್ದರಿಂದ ಮತ್ತಷ್ಟು ಕಂಪೆನಿಗಳ ಪ್ರಾರಂಭಕ್ಕೆ ಅವಕಾಶಗಳಿವೆ.ಪ್ರಸ್ತುತ ಮಾರುಕಟ್ಟೆಯಲ್ಲಿ 2000-6000 ರೂಪಾಯಿಗಳ ದರದ ಮೊಬೈಲ್ ಹ್ಯಾಂಡ್‌ಸೆಟ್‌ಗಳ ವಹಿವಾಟಿನಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ವೇಗವಾಗಿ ಸಾಗುತ್ತಿರುವ ಮೊಬೈಲ್ ಮಾರುಕಟ್ಟೆ, ವಾರ್ಷಿಕವಾಗಿ 130 ಮಿಲಿಯನ್ ಹ್ಯಾಂಡ್‌ಸೆಟ್‌ಗಳ ವಹಿವಾಟು ನಡೆಸುತ್ತಿದೆ. ಇತರ ಕಂಪೆನಿಗಳಿಗಿಂತ ಉತ್ಕ್ರಷ್ಟ ಗುಣಮಟ್ಟದ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸಲಾಗುವುದು ಎಂದು ಹೇಳಿದ್ದಾರೆ.
ನೋಕಿಯಾ, ಸಾಮ್‌ಸುಂಗ್ ಮತ್ತು ಸೋನಿ ಎರಿಕ್ಸನ್ ಮತ್ತು ಮೋಟೋರೋಲಾ ಹಾಗೂ ದೇಶಿಯ ಕಂಪೆನಿಗಲಾದ ಮೈಕ್ರೋಮ್ಯಾಕ್ಸ್, ಕಾರ್ಬನ್ ಇತರ ಕಂಪೆನಿಗಳಿಗೆ ಪೈಪೋಟಿ ನೀಡಲಿದೆ ಎಂದು ಬೀ ಟೆಲಿಟೆಕ್ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ.