ಮುಂಬರುವ 2014ರ ವೇಳೆಗೆ ಭಾರತದಲ್ಲಿ ಶೇ.97ರಷ್ಟು ಗ್ರಾಹಕರು (126 ಕೋಟಿ ಗ್ರಾಹಕರು) ಮೊಬೈಲ್ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಅಧ್ಯಯನ ಸಂಸ್ಥೆ ಐಸುಪ್ಲಿ ಕಾರ್ಪೋರೇಶನ್ ವರದಿಯಲ್ಲಿ ಬಹಿರಂಗಪಡಿಸಿದೆ.
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಮಾರುಕಟ್ಟೆಗೆ, ಹಲವಾರು ದೇಶ ವಿದೇಶಗಳ ಟೆಲಿಕಾಂ ಕಂಪೆನಿಗಳು ಲಗ್ಗೆಯಿಡುತ್ತಿವೆ.ಆದರೆ, ಟೆಲಿಕಾಂ ಕಂಪೆನಿಗಳ ಲಾಭಾಂಶ ಸ್ಥಿರವಾಗಿರಲಿದೆಯೇ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ.
ದೇಶದ ಬೃಹತ್ ಟೆಲಿಕಾಂ ಕಂಪೆನಿಯಾದ ಭಾರ್ತಿ ಏರ್‌ಟೆಲ್, ಹಲವು ಸ್ಪರ್ಧಾತ್ಮಕ ದರ ಸಮರಗಳ ಮಧ್ಯೆಯು ಪ್ರಸಕ್ತ ವರ್ಷದ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ.ಟಾಟಾ ಡೊಕೊಮೊ, ರಿಲಯನ್ಸ್, ವೋಡಾಫೋನ್ ಸೇರಿದಂತೆ ಹಲವಾರು ಕಂಪೆನಿಗಳ ದರ ಸಮರಗಳಿಂದಾಗಿ ಗ್ರಾಹಕರಿಗೆ ಲಾಭವಾದಂತಾಗಿದೆ.
2009ರ ಅವಧಿಗೆ ಹೋಲಿಸಿದಲ್ಲಿ 2010ರ ವರ್ಷಾಂತ್ಯಕ್ಕೆ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಶೇ.46ರಷ್ಟು ಏರಿಕೆಯಾಗಿ 766 ಮಿಲಿಯನ್‌ಗಳಿಗೆ ತಲುಪಿದೆ.ದೇಶದ ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರಿಂದಾಗಿ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಅಧ್ಯಯನ ಸಂಸ್ಥೆ ವರದಿಯಲ್ಲಿ ಬಹಿರಂಗಪಡಿಸಿದೆ.
ದೇಶದಲ್ಲಿ ಮಕ್ಕಳು ಹಾಗೂ ಕಡುಬಡವರನ್ನು ಹೊರತುಪಡಿಸಿ, ಬಹುತೇಕ ಪ್ರತಿಯೊಬ್ಬರು ಮೊಬೈಲ್ ಸೌಲಭ್ಯವನ್ನು ಹೊಂದಿದ್ದಾರೆ. ಹಲವಾರು ಗ್ರಾಹಕರು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನ ಸಂಸ್ಥೆ ಐಸುಪ್ಲಿ ಕಾರ್ಪೋರೇಶನ್‌ನ ಹಿರಿಯ ನಿರ್ದೇಶಕ ಜಗದೀಶ್ ರೆಬೆಲ್ಲೊ ಹೇಳಿದ್ದಾರೆ.