ಕೇಂದ್ರ ಸರಕಾರದ ವಾಣಿಜ್ಯ ನೀತಿಗಳಲ್ಲಿ ಲೋಪದೋಷಗಳಿರುವುದರಿಂದ ಹಣದುಬ್ಬರ ದರದಲ್ಲಿ ಇಳಿಕೆಯಾಗುವ ಯಾವುದೇ ಸಂಕೇತಗಳು ಕಂಡುಬರುತ್ತಿಲ್ಲ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಹೇಳಿಕೆ ನೀಡಿದೆ.
ತರಕಾರಿ ಮತ್ತು ಹಣ್ಣುಗಳ ದರಗಳಲ್ಲಿ ನಿರಂತರ ಏರಿಕೆ ಕಾಣುತ್ತಿರುವುದರಿಂದ ಆಹಾರ ಹಣದುಬ್ಬರ ದರ ಸಗಟು ದರ ಸೂಚ್ಯಂಕಕ್ಕಿಂತ ಏರ್ಕೆ ಕಾಣುತ್ತಿದೆ ಎಂದು ಚೇಂಬರ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಧಾನ್ಯ ತರಕಾರಿ ಮತ್ತು ಹಾಲು ದರಗಳಲ್ಲಿ ಏರಿಕೆಯಾಗಿದ್ದರಿಂದ, ಕಳೆದ ಸೆಪ್ಟೆಂಬರ್ 11 ರಂದು ಆಹಾರ ಹಣದುಬ್ಬರ ದರ ಶೇ.15ಕ್ಕೆ ಏರಿಕೆ ಕಂಡಿತ್ತು.
ಸರಕಾರದ ಭರವಸೆಗಳ ಮಧ್ಯೆಯು, ಕಳೆದ 2007ರಿಂದ ಒಟ್ಟಾರೆ ಆಹಾರ ಹಣದುಬ್ಬರ ದರ ನಿರಂತರ ಏರಿಕೆ ಕಾಣುತ್ತಿದೆ ಎಂದು ಅಸೋಚಾಮ್ ಅಸಮಧಾನ ವ್ಯಕ್ತಪಡಿಸಿದೆ.
ಕೇಂದ್ರದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಇತ್ತಿಚೆಗೆ ಹೇಳಿಕೆ ನೀಡಿ, ಆಹಾರ ಹಣದುಬ್ಬರ ದರ ಇಳಿಕೆಯಾಗುತ್ತಿದ್ದು, ಡಿಸೆಂಬರ್ ವೇಳೆಗೆ ಆಹಾರ ಹಣದುಬ್ಬರ ದರ ಶೇ.6ಕ್ಕೆ ಕುಸಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.