ದೇಶದ ಗ್ರಾಮೀಣ ಮತ್ತು ಅರೆಪಟ್ಟಣಗಳಲ್ಲಿ ವಹಿವಾಟು ಹಾಗೂ ಶಾಖೆಗಳ ವಿಸ್ತರಣೆಯ ಅಂಗವಾಗಿ, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು 34 ಸಾವಿರ ಅಧಿಕಾರಿಗಳು ಹಾಗೂ 51,000 ಕ್ಲರ್ಕ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ಸರಕಾರಿ ಬ್ಯಾಂಕ್‌ಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ಸಮಿತಿ ಸಾರ್ವಜನಿಕ ಕ್ಷೇತ್ರದ 27 ಬ್ಯಾಂಕ್‌ಗಳ ಉದ್ಯೋಗಿಗಳಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಬ್ಯಾಂಕ್‌ಗಳ ಕುರಿತಂತೆ ಎ.ಕೆ.ಖಾಂಡೇಲ್‌ವಾಲ್ ಸಮಿತಿಯ ಶಿಫಾರಸ್ಸಿನಂತೆ, ದೇಶದ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಈಗಾಗಲೇ ಐಬಿಪಿಎಸ್ ಸೇವೆಗಳನ್ನು ಬಳಸಿಕೊಳ್ಳುತ್ತಿವೆ. ಆದ್ದರಿಂದ, ಬ್ಯಾಂಕ್ ಉದ್ಯೋಗಿಗಳ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್‌ಗಳು ಪರೀಕ್ಷಾ ಪಠ್ಯ, ಪರೀಕ್ಷಾ ವಿಧಾನಗಳ ಕುರಿತಂತೆ ನಿರ್ಧರಿಸಬಹುದು. ಆದರೆ, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ಸಮಿತಿ, ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತದೆ ಎಂದು ಖಾಂಡೇಲ್‌ವಾಲ್ ಸಮಿತಿ ಶಿಫಾರಸ್ಸು ಮಾಡಿದೆ.