ವಿಶ್ವದ ಕಡಿಮ ದರದ ಕಾರು ಎನ್ನುವ ಖ್ಯಾತಿಗೊಳಗಾದ ನ್ಯಾನೋ ಕಾರುಗಳ ಮಾರಾಟವನ್ನು ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಆರಂಭಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಮುಂಗಡ ಬುಕ್ಕಿಂಗ್ ಮಾಡದಿರುವ ಗ್ರಾಹಕರು, ಇದೀಗ ನೇರವಾಗಿ ಶೋರೂಂಗಳಿಂದ ನ್ಯಾನೋ ಕಾರುಗಳನ್ನು ಖರೀದಿಸಬಹುದಾಗಿದೆ ಎಂದು ಟಾಟಾ ಮೋಟಾರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಡೀಲರ್‌ಶಿಪ್ ಶೋರೂಂಗಳಿಗೆ ತೆರಳಿ ಗ್ರಾಹಕರು, ನ್ಯಾನೋ ಕಾರನ್ನು ಪ್ರಾಯೋಗಿಕ ಚಾಲನೆಯ ಮೂಲಕ ಹತ್ತಿರದಿಂದ ಪರೀಕ್ಷಿಸಬಹುದಾಗಿದೆ. ಕೇರಳ ರಾಜ್ಯದಲ್ಲಿ ಅಗಸ್ಟ್ ತಿಂಗಳಿನಿಂದ ನ್ಯಾನೋ ಮಾರಾಟ ಆರಂಭಿಸಲಾಗಿದೆ ಎಂದು ಟಾಟಾ ಅಧಿಕಾರಿಗಳು ತಿಳಿಸಿದ್ದಾರೆ.
ಟಾಟಾ ಮೋಟಾರ್ಸ್ ಸಂಸ್ಥೆ ದೇಶದ ಪ್ರಮುಖ 25 ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನ್ಯಾನೋ ಖರೀದಿಸಬಯಸುವ ಗ್ರಾಹಕರು ಹಣಕಾಸಿನ ನೆರವು ಪಡೆಯಬಹುದಾಗಿದೆ.
ಕಳೆದ ವರ್ಷ ಎರಡು ಹಂತಗಳಲ್ಲಿ ನ್ಯಾನೋ ಕಾರುಗಳನ್ನು ವಿತರಿಸಲು 1.55ಲಕ್ಷ ಗ್ರಾಹಕರನ್ನು ಆಯ್ಕೆ ಮಾಡಲಾಗಿತ್ತು.ವರ್ಷಾಂತ್ಯಕ್ಕೆ ಒಂದು ಲಕ್ಷ ಕಾರುಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಟಾಟಾ ಮೂಲಗಳು ತಿಳಿಸಿವೆ.
ಜುಲೈ ತಿಂಗಳ ಅವಧಿಯಲ್ಲಿ ನ್ಯಾನೋ ಕಾರುಗಳ ದರವನ್ನು ವಿವಿಧ ಮಾಡೆಲ್‌ಗಳ ಮೇಲೆ 3,700 ರೂಪಾಯಿಗಳಿಂದ 6,894 ರೂಪಾಯಿಗಳಿಗೆ ಏರಿಕೆ ಘೋಷಿಸಿತ್ತು.
ಆರಂಭಿಕ 1 ಲಕ್ಷ ನ್ಯಾನೋ ಗ್ರಾಹಕರಿಗೆ ಮೊದಲು ನಿಗದಿಪಡಿಸಿದಂತೆ 1.23 ಲಕ್ಷ ರೂಪಾಯಿಗಳಿಂದ 1.72 ಲಕ್ಷ ರೂಪಾಯಿಗಳಿಗೆ ಕಾರುಗಳನ್ನು ನೀಡಲಾಗುತ್ತದೆ. ದರ ಏರಿಕೆ ಆರಂಭಿಕ ಗ್ರಾಹಕರಿಗೆ ಅನ್ವಯವಾಗುವುದಿಲ್ಲ ಟಾಟಾ ಮೋಟಾರ್ಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.