ಖರಗ್ಪುರ್(ಪಶ್ಚಿಮ ಬಂಗಾಳ) , ಬುಧವಾರ, 6 ಅಕ್ಟೋಬರ್ 2010( 18:56 IST )
ದೇಶಾದ್ಯಂತ ರೈಲ್ವೆ ಇಲಾಖೆಗೆ ಅಗತ್ಯವಾಗಿರುವ ತೃತಿಯ ದರ್ಜೆಯ 2ಲಕ್ಷ ಖಾಲಿ ಹುದ್ದೆಗಳನ್ನು ಆರು ತಿಂಗಳೊಳಗಾಗಿ ಭರ್ತಿ ಮಾಡಲು ನಿರ್ಧರಿಸಲಿದ್ದು ಈಗಾಗಲೇ ಕಾರ್ಯಾರಂಭವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಶೀಘ್ರದಲ್ಲಿ ದೇಶಾದ್ಯಂತ ಎರಡು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಆದೇಶಿಸಲಾಗಿದೆ ಎಂದು ಸಚಿವೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬಂದ್ ಕರೆ ಹಾಗೂ ರೈಲ್ವೆ ತಡೆಗಳಿಂದಾಗಿ ವಾರ್ಷಿಕವಾಗಿ ರೈಲ್ವೆ ಇಲಾಖೆಗೆ 500 ಕೋಟಿ ರೂಪಾಯಿಗಳಿಂದ 1000 ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆ.ಇಂತಹ ಘಟನೆಗಳು ಮರುಕಳಿಸಿದಲ್ಲಿ ವೇಗದ ರೈಲುಗಳನ್ನು ಆರಂಭಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ದೇಶಕ್ಕೆ ವೇಗದ ರೈಲುಗಳ ಅನಿವಾರ್ಯತೆಯಿದೆ. ಆದರೆ , ಬಂದ್ ಕರೆ, ರೈಲು ತಡೆಗಳಂತಹ ಘಟನೆಗಳು ಅಡ್ಡಿಯಾಗಿವೆ ಎಂದು ಸಚಿವೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.