ನ್ಯೂಯಾರ್ಕ್, ಶುಕ್ರವಾರ, 8 ಅಕ್ಟೋಬರ್ 2010( 15:07 IST )
ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ದೇಶದ ಆರ್ಥಿಕ ವೃದ್ಧಿ ದರ ಶೇ.9ಕ್ಕೆ ತಲುಪುವ ನಿರೀಕ್ಷೆಗಳಿದ್ದು, ಮುಂಬರುವ 2012ರ ವೇಳೆಗೆ ಎರಡಂಕಿಯ ವೃದ್ಧಿ ದರಕ್ಕೆ ತಲುಪುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ದೇಶದ ಜಿಡಿಪಿ ದರವನ್ನು ಹೆಚ್ಚಿಸಲು ಹಲವು ಕ್ಷೇತ್ರಗಳ ಚೇತರಿಕೆಗೆ ಅಗತ್ಯವಾದ ಬೆಂಬಲ ನೀಡಲು ಸರಕಾರ ಯೋಜನೆಗಳನ್ನು ರೂಪಿಸಿದೆ.ಮುಂಬರುವ ಒಂದೆರಡು ವರ್ಷಗಳ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಎರಡಂಕಿಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
2010-11ರ ಅವಧಿಯ ಮೊದಲ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಶೇ.8.8ಕ್ಕೆ ಏರಿಕೆಯಾಗಿದೆ. ಬಜೆಟ್ ಮಂಡನೆ ಸಂದರ್ಭದಲ್ಲಿ ಜಿಡಿಪಿ ದರ ಶೇ.8.5ಕ್ಕೆ ತಲುಪಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಲಾಗಿತ್ತು.
ದೇಶದ ಆರ್ಥಿಕ ವ್ಯವಸ್ಥೆಯ ಬಲಹೀನತೆಗಳನ್ನು ಹೊಗಲಾಡಿಸಿ, ಕೈಗಾರಿಕೋದ್ಯಮ, ಸೇವಾ ಕ್ಷೇತ್ರಗಳು ಸೇರಿದಂತೆ ಇತರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಲು ಕೇಂದ್ರ ಸರಕಾರ ಕೆಲ ರಿಯಾಯಿತಿಗಳನ್ನು ಘೋಷಿಸಿದೆ ಎಂದು ಸಚಿವ ಮುಖರ್ಜಿ ತಿಳಿಸಿದ್ದಾರೆ.