ವಿಶ್ವಕ್ಕೆ ಕಡಿಮೆ ದರದ ನ್ಯಾನೋ ಕಾರು ನೀಡಿರುವ ಖ್ಯಾತಿಯನ್ನು ಹೊಂದಿರುವ ಟಾಟಾ ಗ್ರೂಪ್, ಸಹೋದರ ಸಂಸ್ಥೆಯಾದ ಟಾಟಾ ಹೌಸಿಂಗ್ ಡೆವಲೆಪ್‌ಮೆಂಟ್ ಕಂಪೆನಿಯಿಂದ ಇದೀಗ ಕಡಿಮೆ ದರದಲ್ಲಿ ಗೃಹಗಳನ್ನು ನೀಡಲು ಯೋಜನೆಗಳನ್ನು ರೂಪಿಸಿದೆ.
ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿಗಳಿಂದ 35 ಲಕ್ಷ ರೂಪಾಯಿಗಳವರೆಗೆ ದರವನ್ನು ನಿಗದಿಪಡಿಸಲಾಗಿದೆ ಎಂದು ಟಾಟಾ ಅಧಿಕಾರಿಗಳು ತಿಳಿಸಿದ್ದಾರೆ.
ಕಡಿಮೆ ದರದಲ್ಲಿ ಸುಂದರವಾದ ಮನೆಗಳಿಗೆ ದೇಶದಲ್ಲಿ ಬಹುಬೇಡಿಕೆಯಿದೆ. ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ ಯೋಜನೆಯಲ್ಲಿ 5 ಲಕ್ಷ ರೂಪಾಯಿಗಳಿಂದ 35 ಲಕ್ಷ ರೂಪಾಯಿಗಳಿಗೆ ನೀಡಲಾಗುತ್ತಿದೆ ಎಂದು ಟಾಟಾ ಹೌಸಿಂಗ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬ್ರೊಟಿನ್ ಬ್ಯಾನರ್ಜಿ ಹೇಳಿದ್ದಾರೆ.
ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ ಯೋಜನೆಯಲ್ಲಿ ಟಾಟಾ ಹೌಸಿಂಗ್ ಸಂಸ್ಥೆ, ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ 2500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಟಾಟಾ ಹೌಸಿಂಗ್ ಸಂಸ್ಥೆ, ಠಾಣೆ ಜಿಲ್ಲೆಯ ವಾಸಿಂದ್ ಪ್ರದೇಶದಲ್ಲಿ 52 ಏಕರೆ ಭೂಮಿಯನ್ನು ಖರೀದಿಸಿದ್ದು 'ಶುಭ ಗೃಹ' ನೂತನ ಟೌನ್‌ಶಿಪ್ ಕಾರ್ಯಾರಂಭ ಮಾಡಿದೆ ಎಂದು ವಿವರಣೆ ನೀಡಿದ್ದಾರೆ.
ವಸಿಂದ್ ರೈಲ್ವೆ ನಿಲ್ದಾಣದಿಂದ ಶಾಹಾಪುರ್ ಮತ್ತು ಕಲ್ಯಾಣ್-ಭಿವಂಡಿ ಜಂಕ್ಷನ್ ಬಳಿ ನೂತನ ಟೌನ್‌ಶಿಪ್ ನಿರ್ಮಾಣವಾಗುತ್ತಿದ್ದು, 1ಆರ್‌ಕೆ(362ಚದುರ ಅಡಿ) ಮತ್ತು 1ಬಿಎಚ್‌ಕೆ (489ಚದುರ ಅಡಿ) ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದ್ದು,5.79 ಲಕ್ಷ ರೂಪಾಯಿಗಳಿಂದ 7.82 ಲಕ್ಷ ರೂಪಾಯಿಗಳ ದರವನ್ನು ನಿಗದಿಪಡಿಸಿದ್ದು, ಮುಂಬರುವ 18-24 ತಿಂಗಳ ಅವಧಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದ್ದಾರೆ.