ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಟೆಕ್ನಾಲಾಜೀಸ್, ಸೆಪ್ಟೆಂಬರ್30ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.13.5ರಷ್ಟು ಏರಿಕೆಯಾಗಿದ್ದು, 1,737 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಸೆಪ್ಟೆಂಬರ್ 30ರ ತ್ರೈಮಾಸಿಕ ಅವಧಿಗೆ ಹೋಲಿಸಿದಲ್ಲಿ,ನಿವ್ವಳ ಲಾಭದಲ್ಲಿ ಶೇ.24ರಷ್ಟು ಹೆಚ್ಚಳವಾಗಿ 5,585 ಕೋಟಿ ರೂಪಾಯಿಗಳಿಂದ 6,947 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್.ಗೋಪಾಲ್‌ಕೃಷ್ಣನ್ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದ ನಂತರ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮುಂಬರುವ ದಿನಗಳಲ್ಲಿ ಏರಡಂಕಿ ಏರಿಕೆ ಕಾಣುವುದಿಲ್ಲ ಎಂದು ಬಹುತೇಕರು ಭಾವಿಸಿದ್ದರು. ಇದೀಗ ದೇಶದ ಸಾಫ್ಟ್‌ವೇರ್ ಕ್ಷೇತ್ರದ ಕಂಪೆನಿಗಳು ಎರಡಂಕಿಯ ಚೇತರಿಕೆ ಕಾಣುತ್ತಿರುವುದು ಸಂತಸ ತರುವ ಸಂಗತಿಯಾಗಿದೆ ಎಂದರು.
ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ 27 ನೂತನ ಗ್ರಾಹಕರನ್ನು ಸೇರ್ಪಡೆಗೊಳಿಸಲಾಗಿದ್ದು, ಒಟ್ಟು 592 ಗ್ರಾಹಕರನ್ನು ಹೊಂದಿದಂತಾಗಿದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಪ್ರಮುಖ ಕಂಪೆನಿಗಳಾಗಿರುವ ಬಿಟಿ ಗ್ರೂಪ್, ಬಿಪಿ ಮತ್ತು ಗೋಲ್ಡ್‌ಮನ್ ಸಾಚೆಸ್ ನಿವ್ವಳ ಲಾಭದಲ್ಲಿ ಭಾರಿ ಚೇತರಿಕೆ ಕಂಡಿದೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಎಸ್.ಡಿ.ಶಿಬುಲಾಲ್ ತಿಳಿಸಿದ್ದಾರೆ.
ಕಂಪೆನಿಯ ಅಡಳಿತ ಮಂಡಳಿ, ಶೇರುದಾರರಿಗೆ ಪ್ರತಿ 5 ರೂಪಾಯಿ ಶೇರಿಗೆ 10 ರೂಪಾಯಿ ಬೋನಸ್ ಘೋಷಿಸಲಾಗಿದೆ ಎಂದು ಕಂಪೆನಿಯ ವಕ್ತಾರರು ಘೋಷಿಸಿದ್ದಾರೆ.