ಹಬ್ಬದ ಮತ್ತು ಮದುವೆ ಸೀಜನ್ ಹಿನ್ನೆಲೆಯಲ್ಲಿ ಚಿನ್ನದ ಸಂಗ್ರಹಕಾರರಿಂದ ಮತ್ತು ಆಭರಣಗಳ ತಯಾರಕರಿಂದ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಚಿನ್ನದ ದರ ಇಂದಿನ ವಹಿವಾಟಿನಲ್ಲಿ ಪ್ರತಿ 10ಗ್ರಾಂಗೆ 135 ರೂಪಾಯಿಗಳ ಏರಿಕೆಯಾಗಿ 20,085 ರೂಪಾಯಿಗಳಿಗೆ ತಲುಪಿದೆ.
ಕಳೆದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 20,120 ರೂಪಾಯಿಗಳಿಗೆ ತಲುಪಿತ್ತು. ಇದೀಗ ಕೇವಲ 35 ರೂಪಾಯಿಗಳ ಕೊರತೆಯನ್ನು ಎದುರಿಸುತ್ತಿದೆ.
ಅದನ್ನು ಹೊರತುಪಡಿಸಿ, ಕೈಗಾರಿಕೋದ್ಯಮ ಕ್ಷೇತ್ರ ಮತ್ತು ನಾಣ್ಯಗಳ ತಯಾರಕರಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿಯ ದರ ಪ್ರತಿ ಕೆಜಿಗೆ 575 ರೂಪಾಯಿಗಳ ಏರಿಕೆಯಾಗಿ 37,000 ರೂಪಾಯಿಗಳಿಗೆ ತಲುಪಿದೆ.
ಶೇರುಪೇಟೆಗಳ ತೊಳಲಾಟದಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬೆಳ್ಳಿಯ ನಾಣ್ಯಗಳ(100ನಾಣ್ಯಗಳು)ದರದಲ್ಲಿ ಕೂಡಾ 100 ರೂಪಾಯಿಗಳ ಏರಿಕೆಯಾಗಿ 36,100 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ವರ್ತಕ ಮೂಲಗಳು ತಿಳಿಸಿವೆ.