ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎಚ್‌ಸಿಎಲ್ ಟೆಕ್ನಾಲಾಜೀಸ್, ಸೆಪ್ಟೆಂಬರ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ, ನಿವ್ವಳ ಲಾಭದಲ್ಲಿ ಶೇ.35.20ರಷ್ಟು ಕುಸಿತವಾಗಿ 194.88 ಕೋಟಿ ರೂಪಾಯಿಗಳಿಗೆ ತಲುಪಿದೆ.
ಅದನ್ನು ಹೊರತುಪಡಿಸಿ, ನವೆಂಬರ್ 1ರಿಂದ ಜಾರಿಗೆ ಬರುವಂತೆ ವಿನೀತ್ ನಯಾರ್ ಅವರನ್ನು ಕಂಪೆನಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಕಂಪೆನಿ ಆದೇಶ ಹೊರಡಿಸಿದೆ. ನಾಯರ್ ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ, 300.75 ಕೋಟಿ ರೂಪಾಯಿಗಳ ಲಾಭವಾಗಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಕಂಪೆನಿ ಬಹಿರಂಗಪಡಿಸಿದೆ.
ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ, ಅಭಿವೃದ್ಧಿ ಚಾಲನೆಯನ್ನು ಮುಂದುವರಿಸಲಾಗುವುದು ಎಂದು ಎಚ್‌ಸಿಎಲ್ ಟೆಕ್ನಾಲಾಜೀಸ್ ಮುಖ್ಯಸ್ಥ ಶಿವ್ ನಡಾರ್ ಹೇಳಿದ್ದಾರೆ.
ಕಂಪೆನಿಯ ಒಟ್ಟು ಆದಾಯ ಜುಲೈ-ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 1,498.32 ಕೋಟಿ ರೂಪಾಯಿಗಳಾಗಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ 1,247.32 ಕೋಟಿ ರೂಪಾಯಿಗಳಾಗಿತ್ತು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.