ತರಕಾರಿ ದರಗಳ ಇಳಿಕೆ ಹಾಗೂ ಸರಬರಾಜಿನಲ್ಲಿ ಚೇತರಿಕೆಯಾಗಿದ್ದರಿಂದ, ಅಕ್ಟೋಬರ್ 9ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.15.53ಕ್ಕೆ ಇಳಿಕೆಯಾಗಿದೆ.
ಹಿಂದಿನ ವಾರದ ಅವಧಿಯಲ್ಲಿ ಶೇ.16.37ರಷ್ಟಿದ್ದ ಆಹಾರ ಹಣದುಬ್ಬರ ದರ, ಪ್ರಸಕ್ತ ವಾರದ ಅವದಿಯಲ್ಲಿ ಶೇ.0.84ರಷ್ಟು ಕುಸಿತವಾಗಿ ಶೇ.15.53ಕ್ಕೆ ತಲುಪಿದೆ ಎಂದು ಸರಕಾರ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.
ವಾರ್ಷಿಕ ಆಧಾರದನ್ವಯ, ಆಲೂಗಡ್ಡೆ ದರದಲ್ಲಿ ಶೇ.50ರಷ್ಟು ಇಳಿಕೆಯಾಗಿದೆ.ಈರುಳ್ಳಿ ದರದಲ್ಲಿ ಶೇ.8.62ರಷ್ಟು ಇಳಿಕೆಯಾಗಿದೆ.ಏತನ್ಮದ್ಯೆ, ದ್ವಿದಳ ಧಾನ್ಯಗಳು ಹಾಲು ಮತ್ತು ಹಣ್ಣುಗಳ ದರಗಳಲ್ಲಿ ನಿರಂತರ ಏರಿಕೆ ಮುಂದುವರಿದಿದೆ.
ಉತ್ತಮ ಮುಂಗಾರು ಮಳೆಯಿಂದಾಗಿ ಆಹಾರ ದರಗಳಲ್ಲಿ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದ್ದು, ಸರಬರಾಜಿನಲ್ಲಿ ಕೂಡಾ ಚೇತರಿಕೆಯಾಗಿರುವುದರಿಂದ,ಆಹಾರ ಹಣದುಬ್ಬರ ಇಳಿಕೆಯಾಗುವ ವಿಶ್ವಾಸವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.