ಸೆಪ್ಟೆಂಬರ್ ತಿಂಗಳಲ್ಲಿ ಅಂತ್ಯಗೊಂಡ ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ತೈಮಾಸಿಕ ಅವಧಿಯಲ್ಲಿ ಕಾರ್ಪೊರೇಶನ್ ಬ್ಯಾಂಕ್ 351.73 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಗಿಂತ (291.67 ಕೋಟಿ ರೂ.) ಇದು ಶೇ. 20.6 ವೃದ್ಧಿಸಿದೆ. ಬ್ಯಾಂಕಿನ ನಿರ್ದೇಶಕ ಮಂಡಳಿಯು ತ್ತೈಮಾಸಿಕ ಫಲಿತಾಂಶ ಅಂಗೀಕರಿಸಿದ ಬಳಿಕ ಬ್ಯಾಂಕಿನ ಅಧ್ಯಕ್ಷ ರಾಮ್‌ನಾಥ್ ಪ್ರದೀಪ್ ಗುರುವಾರ ಈ ವಿವರಗಳನ್ನು ನೀಡಿದ್ದಾರೆ.
ಬ್ಯಾಂಕಿನ ನಿರ್ವಹಣಾ ಲಾಭವು 535.64 ಕೋಟಿ ರೂ.ನಿಂದ 573.48 ಕೋಟಿ ರೂ. (ಶೇ. 7.1), ನಿವ್ವಳ ಬಡ್ಡಿ ಆದಾಯವು 503.51 ಕೋಟಿ ರೂ.ನಿಂದ 715.25 ಕೋಟಿ ರೂ. ಗೆ (ಶೇ. 42.1) ಏರಿದೆ. ಪ್ರಥಮ ಅರ್ಧ ವರ್ಷದಲ್ಲಿ ಈ ಸಾಧನೆಯು ಅನುಕ್ರಮವಾಗಿ 685.51 ಕೋಟಿ ರೂ. (ಶೇ. 23.98), 1193.87 ಕೋಟಿ ರೂ. (ಶೇ. 13.28), 1412.84 ಕೋಟಿ ರೂ. (ಶೇ. 45.5) ವೃದ್ಧಿಯಾಗಿದೆ.