ಕರ್ನಾಟಕ ಸರ್ಕಾರ ಅದಿರು ರಫ್ತು ಮತ್ತು ಸಾಗಾಣಿಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ದೇಶದ್ಲಲಿ ಕಬ್ಬಿಣದ ಅದಿರಿನ ರಫ್ತು ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ತೀವ್ರ ಕುಸಿತ ದಾಖಲಾಗಿದೆ.
ಭಾರತೀಯ ಗಣಿ ಉದ್ಯಮಿಗಳ ಒಕ್ಕೂಟ (ಎಫ್ಐಎಂಐ) ಪ್ರಕಟಿಸಿರುವ ಮಾಹಿತಿಗಳ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಶೇ.47.46ರಷ್ಟು ಕುಸಿತ ಕಂಡಿರುವ ಕಬ್ಬಿಣದ ಅದಿರಿನ ರಫ್ತು ಪ್ರಮಾಣ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.5.7 ದಶ ಲಕ್ಷ ಟನ್ ಆಗಿತ್ತು. ಈ ವರ್ಷ ಅದು 3.02 ದಶ ಲಕ್ಷ ಟನ್‌ಗಳಿಗೆ ಇಳಿದಿದೆ.
ಕಬ್ಬಿಣದ ಅದಿರು ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 218 ದಶಲಕ್ಷ ಟನ್ ಕಬ್ಬಿಣದ ಅದಿರು ರಫ್ತಾಗಿತ್ತು ಎಂದು ಎಫ್ಐಎಂಐ ತಿಳಿಸಿದೆ.
ಅದಿರು ರಫ್ತು ನಿಷೇಧದ ಹಿನ್ನೆಲೆಯಲ್ಲಿ ಕಬ್ಬಿಣದ ಅದಿರಿನ ಬೇಡಿಕೆ ಹಾಗೂ ಬೆಲೆ ಎರಡೂ ಮುಂಬರುವ ದಿನಗಳಲ್ಲಿ ಏರುವ ಸಾಧ್ಯತೆಗಳಿವೆ ಎಂದು ಅದು ಲೆಕ್ಕಾಚಾರ ಹಾಕಿದೆ.