ದೇಶದ ಸಾಫ್ಟ್‌ವೇರ್ ರಫ್ತು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ, ಸೆಪ್ಟೆಂಬರ್ 30ಕ್ಕೆ ಎರಡನೇ ತ್ರೈಮಾಸಿಕ ಅಂತ್ಯಗೊಂಡಂತೆ 1,284.9 ಕೋಟಿ ರೂಪಾಯಿಗಳ ನಿವ್ವಳ ಲಾಭ ದಾಖಲಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ 1,170.7 ಕೋಟಿ ರೂಪಾಯಿಗಳ ನಿವ್ವಳ ಲಾಭ ದಾಖಲಿಸಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಡಿಸೆಂಬರ್ 31ಕ್ಕೆ ಮೂರನೇ ತ್ರೈಮಾಸಿಕ ಅಂತ್ಯಗೊಂಡಂತೆ, ವಿಪ್ರೋ ನಿವ್ವಳ ಆದಾಯ 1,317-1,343 ಮಿಲಿಯನ್ ಡಾಲರ್‌ಗಳಿಗೆ ತಲುಪುವ ನಿರೀಕ್ಷೆಗಳಿವೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ವರದಿ ಸಲ್ಲಿಸಿದೆ.
ವಿಶ್ವದ ಸಾಫ್ಟ್‌ವೇರ್ ಕ್ಷೇತ್ರ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಂದ ಹೆಚ್ಚಿನ ಬೇಡಿಕೆಯ ಲಕ್ಷಣಗಳು ಕಂಡುಬರುತ್ತಿವೆ. ಮುಂಬರುವ ತ್ರೈಮಾಸಿಕ ಅವಧಿಯ ನಿವ್ವಳ ಲಾಭಾಂಶದಲ್ಲಿ ಹೆಚ್ಚಳಾಗುವ ನಿರೀಕ್ಷೆಗಳಿವೆ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ತಿಳಿಸಿದ್ದಾರೆ.
ಕಂಪೆನಿಯ ನಿವ್ವಳ ಆದಾಯದಲ್ಲಿ ಏರಿಕೆಯಾಗಿ 7,730.5 ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ನಿವ್ವಳ ಆದಾಯ 6,917.7 ಕೋಟಿ ರೂಪಾಯಿಗಳಾಗಿತ್ತು ಎಂದು ವರದಿಯಲ್ಲಿ ಪ್ರಕಟಿಸಿದೆ.