ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ, ನಿವ್ವಳ ಬಡ್ಡಿ ಆದಾಯ ಹೆಚ್ಚಳವಾಗಿದ್ದರಿಂದ, ಸೆಪ್ಟೆಂಬರ್ 30ಕ್ಕೆ ಎರಡನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.90.7ರಷ್ಟು ಏರಿಕೆಯಾಗಿ 616.7 ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ 323.2 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಬ್ಯಾಂಕ್‌ನ ಒಟ್ಟು ನಿವ್ವಳ ಆದಾಯ ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.11.1ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 5,164.9 ಕೋಟಿ ರೂಪಾಯಿಗಳಿಗೆ ತಲುಪಿತ್ತು.
ನಿವ್ವಳ ಬಡ್ಡಿ ಆದಾಯದಲ್ಲಿ ಶೇ.26ರಷ್ಟು ಏರಿಕೆಯಾಗಿ 1,776.1 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ 1,408.9 ಕೋಟಿ ರೂಪಾಯಿಗಳಾಗಿತ್ತು ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ಆದಾಯ 5,155.5 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ 4,488.9 ಕೋಟಿ ರೂಪಾಯಿಗಳಾಗಿತ್ತು.