ಹೌದು ಇದು ಅಧಿಕೃತ ಘೋಷಣೆ!ಕ್ಯಾಸೆಟ್ ಹಾಕಿ ಹಾಡು ಕೇಳುವ ವಾಕ್‌ಮನ್ ನಿವೃತ್ತಿಯಾಗಿದೆ. ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆ ಸಂಸ್ಥೆಯಾದ ಸೋನಿ, ವಾಕ್‌ಮ್ಯಾನ್ ಉತ್ಪಾದನೆಯನ್ನು ನಿಲ್ಲಿಸಿರುವುದಾಗಿ ಘೋಷಿಸಿದೆ.
ಅಂತಿಮ ಹಂತದಲ್ಲಿ ಉತ್ಪಾದನೆಯಾಗಿರುವ ವಾಕ್‌ಮನ್‌ಗಳನ್ನು ಜಪಾನ್‌ನ ರಿಟೇಲ್ ವಹಿವಾಟುದಾರರಿಗೆ ವರ್ಗಾಯಿಸಲಾಗಿದ್ದು, ನೂತನವಾಗಿ ಉತ್ಪಾದಿಸಲಾಗುವುದಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
1979ರ ಜುಲೈನಲ್ಲಿ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ವಾಕ್‌ಮ್ಯಾನ್‌ಗಳು ಬಿಸಿದೋಸೆಗಳಂತೆ ಬಿಕರಿಯಾಗಿ, ವಿಶ್ವದಾದ್ಯಂತ ಯುವ ಹೃದಯಗಳಲ್ಲಿ ಕಿಚ್ಚೆಬ್ಬಿಸಿದ್ದವು.
ಅಮೆರಿಕದಲ್ಲಿ ಸೌಂಡಾಬೌಟ್ ಮತ್ತು ಇಂಗ್ಲೆಂಡ್‌ನಲ್ಲಿ ಸ್ಟೋವಾವೇ ಎಂದು ಕರೆಯಲಾಗುತ್ತಿತ್ತು.ಏತನ್ಮಧ್ಯೆ, ಆರಂಭದ ತಿಂಗಳಲ್ಲಿ ಕೇವಲ 3 ಸಾವಿರ ವಾಕ್‌ಮ್ಯಾನ್‌ಗಳು ಮಾರಾಟವಾಗಿದ್ದವು.ಆದರೆ, ಸೋನಿ ಸಂಸ್ಥೆ 30 ವರ್ಷಗಳ ಅವಧಿಯಲ್ಲಿ 200 ಮಿಲಿಯನ್ ವಾಕ್‌ಮ್ಯಾನ್‌ಗಳನ್ನು ಮಾರಾಟ ಮಾಡಿ ದಾಖಲೆ ಸ್ಥಾಪಿಸಿತು.