ಕೇಂದ್ರದ ಟೆಲಿಕಾಂ ಖಾತೆ ಸಚಿವ ಎ.ರಾಜಾ ಭಾಗಿಯಾಗಿದ್ದಾರೆ ಎನ್ನಲಾದ 2ಜಿ ತರಂಗಾಂತರಗಳ ಹಂಚಿಕೆ ಅವ್ಯವಹಾರ ಪ್ರಕರಣದ ತನಿಖೆಯನ್ನು ವಿಳಂಬವಾಗಿ ನಡೆಸುತ್ತಿರುವ ತಂಡವನ್ನು ಅಪೆಕ್ಸ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದಲ್ಲಿ ಯಾವುದೇ ರೀತಿಯ ಪ್ರಗತಿ ಸಾಧಿಸಲಾಗಿಲ್ಲ. ಸರಕಾರ ಇದೇ ರೀತಿ ಕಾರ್ಯನಿರ್ವಹಿಸುತ್ತಿದೆಯೇ. ಎಲ್ಲಾ ಪ್ರಕರಣಗಳನ್ನು ವಿಳಂಬವಾಗಿ ತನಿಖೆ ಮಾಡುತ್ತಿದ್ದೀರಾ. ಈಗಾಗಲೇ ತನಿಖೆ ಆರಂಭವಾಗಿ ಒಂದು ವರ್ಷವಾಗಿದೆ ಎಂದು ಜಿ.ಎಸ್. ಸಾಂಘ್ವಿ ಮತ್ತು ಎ,ಕೆ.ಗಂಗೂಲಿ ನ್ಯಾಯಮೂರ್ತಿಗಳ ಪೀಠ ಸರಕಾರದ ವಿರುದ್ಧ ಕೆಂಡ ಕಾರಿದೆ.
ಏತನ್ಮಧ್ಯೆ, 2ಜಿ ತರಂಗಾಂತರ ಹಂಚಿಕೆ ಪ್ರಕರಣ ತುಂಬಾ ಆಳವಾಗಿ ಬೇರೂರಿದ್ದರಿಂದ ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂದು ಸಿಬಿಐ ಪರ ವಕೀಲ ರಾವಲ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ರಾವಲ್ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿದ ಅಪೆಕ್ಸ್ ನ್ಯಾಯಾಲಯ, 2ಜಿ ಪ್ರಕರಣದ ತನಿಖೆಗೆ ಹತ್ತು ವರ್ಷಗಳ ಅಗತ್ಯವಿದೆಯೇ ಎಂದು ವ್ಯಂಗವಾಗಿ ಪ್ರಶ್ನಿಸಿತು.
ಸಿಬಿಐ ಪರ ವಕೀಲ ರಾವಲ್ ಮಾತನಾಡಿ,ಮುಂಬರುವ ಆರು ತಿಂಗಳೊಳಗಾಗಿ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಭರವಸೆ ನೀಡಿದರು.