ಕಡಿಮೆ ದರದ ಖ್ಯಾತಿಯ ನ್ಯಾನೋ ಕಾರಿನ ದರವನ್ನು ಹೆಚ್ಚಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ನವೆಂಬರ್ 1ರಿಂದ ಜಾರಿಗೆ ಬರುವಂತೆ ನ್ಯಾನೋ ವಿವಧ ಮಾಡೆಲ್‌ಗಳ ದರಗಳಲ್ಲಿ 9 ಸಾವಿರ ರೂಪಾಯಿಗಳ ಹೆಚ್ಚಳವನ್ನು ಘೋಷಿಸಿದೆ.
ಕಳೆದ ಜುಲೈ ತಿಂಗಳಲ್ಲಿ ನ್ಯಾನೋ ದರ ಏರಿಕೆಯನ್ನು ಘೋಷಿಸಿದ ನಂತರ ಇದೀಗ ಎರಡನೇ ಬಾರಿಗೆ ದರ ಏರಿಕೆಯನ್ನು ಪ್ರಕಟಿಸಿದೆ.ಕಚ್ಚಾ ವಸ್ತುಗಳ ದರ ಹೆಚ್ಚಳದ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಟಾಟಾ ಮೋಟಾರ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾನೋ ದರ ಏರಿಕೆ ನಗರಗಳಿಂದ ನಗರಗಳಿಗೆ ಹಾಗೂ ಮಾಡೆಲ್‌ನಿಂದ ಇತರ ಮಾಡೆಲ್‌ಗೆ ಭಿನ್ನವಾಗಿರುತ್ತದೆ. ಸರಾಸರಿ 9 ಸಾವಿರ ರೂಪಾಯಿಗಳಷ್ಟು ದರ ಹೆಚ್ಚಳ ಘೋಷಿಸಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಮೋಟಾರ್ಸ್ ವಕ್ತಾರರನ್ನು ಸಂಪರ್ಕಿಸಿದಾಗ, ದರ ಏರಿಕೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ ಮತ್ತು ನೂತನವಾಗಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ.ಇದಕ್ಕಿಂತ ಮೊದಲು ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ದರ ಏರಿಕೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಟಾ ಮೋಟಾರ್ಸ್ ಸಂಸ್ಥೆ ನ್ಯಾನೋ ಕಾರುಗಳನ್ನು ಮುಕ್ತವಾಗಿ ಮಾರಾಟ ಮಾಡಲು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿವೆ.