ಯುಬಿ ಗ್ರೂಪ್ ಮಾಲೀಕರಾದ ಬಿಲಿಯನೇರ್ ವಿಜಯ್ ಮಲ್ಯ, ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಪ್ರತಿ ಅಪಾರ್ಟ್‌ಮೆಂಟ್ ದರ ಅಂದಾಜು 18 ಕೋಟಿ ರೂಪಾಯಿಗಳನ್ನು ನಿಗದಿಪಡಿಸುವ ಸಾಧ್ಯತೆಗಳಿವೆ.
ಮಲ್ಯ ಮಾಲೀಕತ್ವದ ಯುನೈಟೆಡ್ ಬ್ರೆವರೀಸ್ ಹೋಲ್ಡಿಂಗ್ಸ್ ಮತ್ತು ಪ್ರೆಸ್ಟಿಜ್ ಎಸ್ಟೇಟ್ ಪ್ರೋಜೆಕ್ಟ್ಸ್ ಜಂಟಿಯಾಗಿ 4.5 ಏಕರೆ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಡಿಸೆಂಬರ್‌ನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಪ್ರೆಸ್ಟಿಜ್ ಕಂಪೆನಿ ಮುಖ್ಯಸ್ಥ ಇರ್ಫಾನ್ ರಜಾಕ್ ತಿಳಿಸಿದ್ದಾರೆ.
ವಿಶ್ವದ ಆರ್ಥಿಕತೆಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ, ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿದೆ. ಗ್ರಾಹಕರ ಬೇಡಿಕೆಗಳನ್ನು ಗಮನಿಸಿ, ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಯುನೈಟೆಡ್ ಬ್ರೆವರೀಸ್ ಮುಖ್ಯಸ್ಥ ವಿಜಯ್ ಮಲ್ಯ ತಿಳಿಸಿದ್ದಾರೆ.
ದೇಶದ ಶ್ರೀಮಂತ ಉದ್ಯಮಿ ಎನ್ನುವ ಖ್ಯಾತಿ ಪಡೆದ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ದಕ್ಷಿಣ ಮುಂಬೈನಲ್ಲಿ 2 ಬಿಲಿಯನ್ ಡಾಲರ್ ವೆಚ್ಚದ 27 ಅಂತಸ್ತಿನ ಐಷಾರಾಮಿ ಕಟ್ಟಡದಲ್ಲಿ ವಾಸಿಸುತ್ತಿರುವುದರಿಂದ, ಇತರ ಉಧ್ಯಮಿಗಳು ಕೂಡಾ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಕನಸು ಕಾಣುತ್ತಿದ್ದಾರೆ.
ಖಾಸಗಿ ಕಂಪೆನಿಗಳ ಉನ್ನತ ಅದಿಕಾರಿಗಳು, ಕಾರ್ಪೋರೇಟ್ ಕಂಪೆನಿಗಳ ಉದ್ಯೋಗಿಗಳು, ಅನಿವಾಸಿ ಭಾರತೀಯರು ಮತ್ತು ಶ್ರೀಮಂತ ವ್ಯಕ್ತಿಗಳಿಂದ ನಗರದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಮುಂಬೈ ಮೂಲದ ಉದ್ಯಮಿ ಅನುಜ್ ಪುರಿ ಹೇಳಿದ್ದಾರೆ.
ದೇಶದ ಉದ್ಯಮ ವಲಯಗಳಲ್ಲಿ ಅಗ್ರಸ್ಥಾನದಲ್ಲಿರುವ 100 ಉದ್ಯಮಿಗಳ ಒಟ್ಟು ವಾರ್ಷಿಕ ಸಂಪತ್ತು, 300 ಬಿಲಿಯನ್ ಡಾಲರ್‌ಗಳಿಗೂ ಮೀರಿದೆ. ಮುಂಬರುವ ಐದು ವರ್ಷಗಳ ಅವಧಿಯಲ್ಲಿ ದೇಶದ ಉದ್ಯಮಿಗಳ ಸಂಪತ್ತಿನಲ್ಲಿ ದ್ವಿಗುಣವಾಗಲಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.