ದೀಪಾವಳಿ: ಬೇಡಿಕೆ ಹೆಚ್ಚಳದಿಂದಾಗಿ ಚಿನ್ನ, ಬೆಳ್ಳಿಯ ದರ ಗಗನಕ್ಕೆ
ನವದೆಹಲಿ, ಶನಿವಾರ, 30 ಅಕ್ಟೋಬರ್ 2010( 16:36 IST )
ಸಾಗರೋತ್ತರ ಮಾರುಕಟ್ಟೆಗಳ ಸ್ಥಿರ ವಹಿವಾಟಿನ ಮಧ್ಯೆಯು ದೀಪಾವಳಿ ಹಬ್ಬದಿಂದಾಗಿ ಬೆಳ್ಳಿ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಬೆಳ್ಳಿಯ ದರ ಪ್ರತಿ ಕೆಜಿಗೆ 37,500 ರೂಪಾಯಿಗಳಿಗೆ ತಲುಪಿದೆ.
ಕೈಗಾರಿಕೆ ಕ್ಷೇತ್ರ ಹಾಗೂ ನಾಣ್ಯಗಳ ತಯಾರಕರಿಂದ ಬೆಳ್ಳಿ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿ ಪ್ರತಿ ಕೆಜಿಗೆ 900 ರೂಪಾಯಿಗಳ ದಾಖಲೆಯ ಏರಿಕೆ ಕಂಡು 37,500 ರೂಪಾಯಿಗಳಿಗೆ ತಲುಪಿದೆ.
ಅದರಂತೆ, ಚಿನ್ನದ ದರದಲ್ಲಿ ಕೂಡಾ ಪ್ರತಿ10ಗ್ರಾಂಗೆ 125 ರೂಪಾಯಿಗಳ ಏರಿಕೆಯಾಗಿ 19,925 ರೂಪಾಯಿಗಳಿಗೆ ತಲುಪಿದೆ. ಕಳೆದ ಅಕ್ಟೋಬರ್ 15 ರಂದು ಚಿನ್ನದ ದರ ಪ್ರತಿ 10ಗ್ರಾಂಗೆ 20,120 ರೂಪಾಯಿಗಳಿಗೆ ತಲುಪಿತ್ತು.
ಗ್ರಾಹಕರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೂಜೆಗಾಗಿ ನಾಣ್ಯಗಳನ್ನು ಬಳಸುತ್ತಿದ್ದು, ಮದುವೆಗಳಲ್ಲಿ ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ನೀಡುವ ಹಿನ್ನೆಲೆಯಲ್ಲಿ, ಬೆಳ್ಳಿಯ ದರ ಗಗನಕ್ಕೇರಿದೆ.