ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸುವ ನಿರೀಕ್ಷೆಗಳಿಂದಾಗಿ ಆರ್‌ಬಿಐ ಗವರ್ನರ್ ಡಿ.ಸುಬ್ಬಾರಾವ್, ಕೇಂದ್ರದ ವಿತ್ತಕಾತೆ ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ 2 ರಂದು ಎರಡನೇ ತ್ರೈಮಾಸಿಕ ಆರ್ಥಿಕ ಪರಿಷ್ಕರಣ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ, ಆರ್‌ಬಿಐ ಗವರ್ನರ್ ಸುಬ್ಬಾರಾವ್ ಸಚಿವ ಮುಖರ್ಜಿ ಮ್ಯಾಕ್ರೋ-ಎಕಾನಾಮಿಕ್ ವಿಷಯಗಳ ಕುರಿತಂತೆ ಚರ್ಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಇಲ್ಲಿಯವರೆಗೆ ಐದು ಬಾರಿ, ರೆಪೋ, ರಿವರ್ಸ್ ರೆಪೋ ದರಗಳಲ್ಲಿ ಹೆಚ್ಚಳ ಘೋಷಿಸಿದೆ.ಇದೀಗ ಮತ್ತೆ 20 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಘೋಷಿಸುವ ಸಾಧ್ಯತೆಗಳಿವೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಅವಧಿಯಲ್ಲಿ ಆರ್‌ಬಿಐ, ರೆಪೋ ದರಗಳಲ್ಲಿ 125 ಬೇಸಿಸ್ ಪಾಯಿಂಟ್‌ಗಳು ಹಾಗೂ ರಿವರ್ಸ್ ರೆಪೋ ದರಗಳಲ್ಲಿ 175 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯನ್ನು ಈಗಾಗಲೇ ಘೋಷಿಸಿವೆ.
ಕಳೆದ ಸೆಪ್ಟೆಂಬರ್ 16 ರಂದು ಆರ್‌ಬಿಐ, ಮಧ್ಯ-ತ್ರೈಮಾಸಿಕ ಪರಿಷ್ಕರಣ ಸಭೆಯಲ್ಲಿ ರೆಪೋ ದರಗಳಲ್ಲಿ ಶೇ.6ರಷ್ಟು ಮತ್ತು ರಿವರ್ಸ್ ರೆಪೋ ದರಗಳಲ್ಲಿ ಶೇ.5ರಷ್ಟು ಹೆಚ್ಚಳ ಘೋಷಿಸಿತ್ತು.