ದೇಶದ ವಾಹನೋದ್ಯಮ ಕ್ಷೇತ್ರದಲ್ಲಿ ಚಿರಪರಿಚಿತವಾದ ಟಿವಿಎಸ್ ಮೋಟಾರ್ ಕಂಪೆನಿ, ಅಕ್ಟೋಬರ್ ತಿಂಗಳ ಅವಧಿಯ ವಾಹನಗಳ ಮಾರಾಟದಲ್ಲಿ ಶೇ.48ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ಅಕ್ಟೋಬರ್ ತಿಂಗಳ ಅವದಿಯಲ್ಲಿ ಒಟ್ಟು 195,271ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 131,941 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಏಪ್ರಿಲ್-ಅಕ್ಟೋಬರ್‌ವರೆಗಿನ ಒಟ್ಟು ವಾಹನಗಳ ಮಾರಾಟ 1.12 ಮಿಲಿಯನ್‌ಗಳಿಗೆ ತಲುಪಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.46ರಷ್ಟು ಏರಿಕೆಯಾಗಿ, 191,822 ವಾಹನಗಳನ್ನು ಮಾರಾಟ ಮಾಡಲಾಗಿದೆ.ಕಳೆದ 2009ರ ಅವಧಿಯ ಅಕ್ಟೋಬರ್ ತಿಂಗಳ ಅವಧಿಯಲ್ಲಿ 131,029 ವಾಹನಗಳನ್ನು ಮಾರಾಟ ಮಾಡಲಾಗಿತ್ತು.
ವಾಹನಗಳ ರಫ್ತು ವಹಿವಾಟಿನಲ್ಲಿ ಶೇ.45ರಷ್ಟು ಏರಿಕೆಯಾಗಿದ್ದು 18,051 ವಾಹನಗಳನ್ನು ರಫ್ತು ಮಾಡಲಾಗಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ 12,466 ವಾಹನಗಳನ್ನು ರಫ್ತು ಮಾಡಲಾಗಿತ್ತು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.